ವಿಧಾನ ಪರಿಷತ್ ಚುನಾವಣೆ: ಲಿಂಗಾಯತ ಅಭ್ಯರ್ಥಿಗಳಿಗೆ ಕಾಂಗ್ರೆಸ್, ಬಿಜೆಪಿ ಮನ್ನಣೆ; ಇತರ ಸಮುದಾಯಗಳ ಕಡೆಗಣನೆ!
ಬೆಳಗಾವಿ : ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ವಿವಿಧ ಪ್ರಬಲ ಸಮುದಾಯಗಳಿಂದ ಬೆಂಬಲ ಸಿಗುತ್ತಿದ್ದರೂ, ಈ ಭಾಗದ ನಾಲ್ಕು ಪ್ರಮುಖ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎರಡೂ ಪಕ್ಷಗಳು ಪ್ರಭಾವಿ ಲಿಂಗಾಯತ ಮುಖಂಡರನ್ನು ಕಣಕ್ಕಿಳಿಸಲು ಮುಂದಾಗಿವೆ.
ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ಬಹುತೇಕ ಹಾಲಿ ವಿಧಾನ ಪರಿಷತ್ ಸದಸ್ಯರು ಲಿಂಗಾಯತ ಸಮುದಾಯದವರಾಗಿದ್ದಾರೆ. ಬೆಳಗಾವಿ/ಚಿಕ್ಕೋಡಿ, ಹುಬ್ಬಳ್ಳಿ-ಧಾರವಾಡ-ಗದಗ-ಹಾವೇರಿ, ವಿಜಯಪುರ-ಬಾಗಲಕೋಟ ಮತ್ತು ಕಲಬುರ್ಗಿ ಮತ್ತು ಯಾದಗಿರಿಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಬಹುತೇಕ ಹಾಲಿ ಎಂಎಲ್‌ಸಿಗಳು ಪ್ರಭಾವಿ ಕುಟುಂಬದಿಂದ ಬಂದ ಲಿಂಗಾಯತರು. ಮತ್ತು ಹಾಲಿ ಎಂಎಲ್‌ಸಿಗಳ ವಿರುದ್ಧ ಸ್ಪರ್ಧಿಸುವವರಲ್ಲಿ ಹೆಚ್ಚಿನವರು ಲಿಂಗಾಯತರೇ ಆಗಿದ್ದಾರೆ.
ಉತ್ತರ ಕರ್ನಾಟಕದ ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ಹಲವು ಸಮುದಾಯಗಳ ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ಆಕಾಂಕ್ಷಿಗಳನ್ನು ಎರಡೂ ಪಕ್ಷಗಳಿಂದ ಕಡೆಗಣಿಸಲಾಗಿದೆ.
ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯವು ಪ್ರಮುಖವಾಗಿರಬಹುದು ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನುಪಕ್ಷಗಳನ್ನು ಇತರ ಅನೇಕ ಸಮುದಾಯಗಳು ಪ್ರಬಲವಾಗಿ ಬೆಂಬಲಿಸುತ್ತಿದ್ದಾರೆ ಎಂದು ಅನೇಕ ಹೆಸರಾಂತ ರಾಜಕಾರಣಿಗಳು ಹೇಳುತ್ತಾರೆ. ವಿಜಯಪುರ-ಬಾಗಲಕೋಟೆ ಕ್ಷೇತ್ರದಲ್ಲಿ ಹಿರಿಯ ನಾಯಕ ಎಂ.ಬಿ.ಪಾಟೀಲ್ ಅವರ ಕುಟುಂಬದ ಬೆನ್ನಿಗೆ ಕಾಂಗ್ರೆಸ್ ನಿಂತಿದೆ. ಎಂಬಿ ಪಾಟೀಲ್ ಸಹೋದರ ಸುನೀಲಗೌಡ ಪಾಟೀಲ್ ವಿಜಯಪುರದಿಂದ , ಬಾಗಲಕೋಟೆಯಿಂದ ಎಸ್‌ಆರ್ ಪಾಟೀಲ್ (ಇಬ್ಬರೂ ಲಿಂಗಾಯತರು) ಹಾಲಿ ಎಂಎಲ್‌ಸಿಗಳಾಗಿದ್ದಾರೆ.
ಪಕ್ಷವು ಈ ಬಾರಿಯೂ ಸುನೀಲಗೌಡ ಅವರನ್ನು ಕಣಕ್ಕಿಳಿಸುವುದು ಖಚಿತವಾಗಿದೆ. ವಿಜಯಪುರ-ಬಾಗಲಕೋಟದಿಂದ ಲಿಂಗಾಯತರಾದ ಜಿ ಎಸ್ ನ್ಯಾಮಗೌಡ, ಪ್ರಕಾಶ್ ತಪಶೆಟ್ಟಿ ಅಥವಾ ಪಿ.ಎಚ್ ಪೂಜಾರ್ ಅವರಲ್ಲಿ ಒಬ್ಬರನ್ನು ಕಣಕ್ಕಿಳಿಸಲು ಬಿಜೆಪಿ ಉತ್ಸುಕವಾಗಿದೆ.
ಬಿಜೆಪಿಯ ಮಹಾಂತೇಶ ಕವಟಗಿಮಠ ಸ್ಪರ್ಧಿಸುತ್ತಿರುವ ಬೆಳಗಾವಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಲಕ್ಷ್ಮಿ ಹೆಬ್ಬಾಳ್ಕರ್ (ಲಿಂಗಾಯತ) ಸಹೋದರ 36 ವರ್ಷದ ಚನ್ನರಾಜ್ ಹಟ್ಟಿಹೊಳಿಯನ್ನು ಕಣಕ್ಕಿಳಿಸುವ ಸಲುವಾಗಿ ಐದು ಬಾರಿ ಶಾಸಕ ವೀರಕುಮಾರ ಪಾಟೀಲ್ (ಜೈನ್) ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಕಾಂಗ್ರೆಸ್ ಪಕ್ಷ ಕಡೆಗಣಿಸಿದೆ.
ಹುಬ್ಬಳ್ಳಿ-ಧಾರವಾಡ-ಹಾವೇರಿ-ಗದಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಹಾಲಿ ಎಂಎಲ್‌ಸಿ ಜಗದೀಶ ಶೆಟ್ಟರ್ ಅವರ ಸಹೋದರ ಪ್ರದೀಪ ಶೆಟ್ಟರ್ ಬಿಜೆಪಿಯಿಂದ ಮತ್ತೆ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳೂ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಲಿಂಗಾಯತ ಶರಣಪ್ಪ ಕೊಟಗಿ ಕಾಂಗ್ರೆಸ್ ಟಿಕೆಟ್ ಪಡೆಯುವ ಫೇವರಿಟ್ ಆಗಿದ್ದಾರೆ. ಕಾಂಗ್ರೆಸ್ ಇಲ್ಲಿ ಲಿಂಗಾಯತರನ್ನು ಕಣಕ್ಕಿಳಿಸಲಿದೆಯೇ ಅಥವಾ ಇತರರನ್ನು ಆಯ್ಕೆ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕಲಬುರ್ಗಿ-ಯಾದಗಿರಿ ಕ್ಷೇತ್ರದಲ್ಲಿ ಬಿಜೆಪಿಯ ಬಿ.ಜಿ.ಪಾಟೀಲ್, ಲಿಂಗಾಯತ ಹಾಲಿ ಎಂಎಲ್ಸಿ ಆಗಿದ್ದು, ಮತ್ತೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಿಂದ ಸ್ಪರ್ಧಿಸಲು ಸಿದ್ಧವಾಗಿದ್ದು, ಬಿಜೆಪಿಯ ಹನುಮಂತ ಭೂಸನೂರ್ ವಿರುದ್ಧ ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷ ಉತ್ಸುಕವಾಗಿದೆ.
ರಾಜಕೀಯ ಪಕ್ಷಗಳು ಒಂದೇ ಒಂದು ಸಮುದಾಯದ ಹಿಂದೆ ಹೋಗುತ್ತಿರುವ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಉನ್ನತ ನಾಯಕರೊಬ್ಬರು, 'ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರಾಗಿರುವ ಜಿಪಿ, ಟಿಪಿ ಮತ್ತು ಜಿಪಿ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 33 ರಷ್ಟು ಸದಸ್ಯರು ಎಸ್‌ಸಿ/ಎಸ್‌ಟಿ ಸಮುದಾಯದವರಾಗಿದ್ದಾರೆ.
ರಾಜ್ಯದಲ್ಲಿ ದುರದೃಷ್ಟವಶಾತ್ ಸ್ಥಳೀಯ ಸಂಸ್ಥೆಗಳಿಂದ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಸಮುದಾಯದ ಅಭ್ಯರ್ಥಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಪಕ್ಷದ ಟಿಕೆಟ್ ಸಿಗುತ್ತಿಲ್ಲ. ಹಾಗೆಯೇ ಎಲ್ಲಾ ಕ್ಷೇತ್ರಗಳಲ್ಲಿ ಇತರ ಹಲವು ಸಮುದಾಯಗಳ ಮತಗಳ ಪಾಲು ಗಣನೀಯವಾಗಿದೆ. ಆದರೂ ಆ ಸಮುದಾಯ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ