ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಒಗ್ಗೂಡಿ: ಋಷಿಕುಮಾರ ಸ್ವಾಮೀಜಿ

ಚಿತ್ರದುರ್ಗ: 'ಬಲಿಷ್ಠ ಹಿಂದೂ ರಾಷ್ಟ್ರ ನಿರ್ಮಾಣ ಆಗಲೇಬೇಕು. ಅದಕ್ಕಾಗಿ ಪ್ರತಿಯೊಬ್ಬ ಹಿಂದೂ ಒಗ್ಗೂಡಬೇಕು' ಎಂದು ಕಾಳಿಕಾ ಯುವಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಋಷಿಕುಮಾರ ಸ್ವಾಮೀಜಿ ಸಲಹೆ ನೀಡಿದರು.
ರಾಷ್ಟ್ರೀಯ ಮಟ್ಟದ ಹಿಂದೂಪರ ಸಂಘಟನೆಗಳ ಮಹಾಒಕ್ಕೂಟದಿಂದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
'ರಾಜ್ಯದಲ್ಲಿ ಮತಾಂತರ ನಿತ್ಯ ನಿರಂತರವಾಗಿದೆ. ಮೊದಲೆಲ್ಲಾ ಕೇವಲ ದಲಿತರನ್ನು ಮಾತ್ರ ಸೆಳೆದುಕೊಳ್ಳುತ್ತಿದ್ದರು. ಈಗ ಎಲ್ಲ ಜಾತಿಗೂ ವಿಸ್ತರಣೆಯಾಗಿದೆ. ಹೀಗೆ ಮುಂದುವರಿದರೆ ಹಿಂದೂಗಳು ತಮ್ಮ ಅಸ್ತಿತ್ವ ಕಳೆದು
ಕೊಂಡು ಬೇರೊಂದು ಧರ್ಮಕ್ಕೆ
ತಲೆಬಾಗಬೇಕಾಗುತ್ತದೆ. ಆದ್ದರಿಂದ ಮತಾಂತರ ವಿಚಾರವಾಗಿ ಹಿಂದೂಪರ ಸಂಘಟನೆಗಳು ಒಗ್ಗೂಡಲೇಬೇಕಿದೆ' ಎಂದರು.
'ಹಿಂದೂಗಳಲ್ಲಿ ಇರುವ ಒಗ್ಗಟ್ಟಿನ ಕೊರತೆಯನ್ನು ಅನ್ಯ ಧರ್ಮೀಯರು ಲಾಭ ಪಡೆಯುತ್ತಿದ್ದಾರೆ. ಜಾತ್ಯತೀತ ಎನ್ನುವ ಅನೇಕ ಮಠಾಧೀಶರೂ ಹಿಂದೂಗಳ ಪರವಾಗಿ ನಿಲ್ಲುತ್ತಿಲ್ಲ. ದೇಶದೊಳಗೆ ಹಿಂದೂ ಸಂಘಟನೆಗಳು ಜಾಗೃತರಾಗದಿದ್ದರೆ ಉಳಿಗಾಲವಿಲ್ಲ' ಎಂದರು.
ಮುಖಂಡ ಡಿ.ಎಸ್.ಸುರೇಶ್‌ಬಾಬು, 'ಭಾರತ ಹಿಂದೂ ರಾಷ್ಟ್ರವಾಗಬೇಕು ಎಂಬ ಸಂಕಲ್ಪದೊಂದಿಗೆ ಈ ಮಹತ್ಕಾರ್ಯಕ್ಕೆ ಮುಂದಾಗಿದ್ದೇನೆ. ಅನೇಕರ ಉದ್ದೇಶ ಒಂದೇ ಆಗಿದ್ದರೂ ಸಂಘಟನೆಗಳು ಮಾತ್ರ ಬೇರೆ-ಬೇರೆಯಾಗಿವೆ. ಮೊದಲ
ಹಂತದಲ್ಲಿ ರಾಜ್ಯದಲ್ಲಿನ 64 ಹಿಂದೂಪರ ಸಂಘಟನೆ ಒಂದೇ ವೇದಿಕೆಯಲ್ಲಿ ತರಲು ಶ್ರಮಿಸುತ್ತಿದ್ದೇವೆ' ಎಂದರು.
ಸಭೆಗೂ ಮುನ್ನ ಸಂಘಟಕರು ಇಲ್ಲಿಯ ನೀಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಅಲ್ಲಿಂದ ಆರಂಭವಾದ ಪಾದಯಾತ್ರೆ ಕನಕದಾಸ, ಸಂಗೊಳ್ಳಿ ರಾಯಣ್ಣ, ಬಿ.ಆರ್.ಅಂಬೇಡ್ಕರ್, ಮದಕರಿ ನಾಯಕ, ಒನಕೆ ಓಬವ್ವ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ರಾಷ್ಟ್ರೀಯ ದಲಿತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಓಬಳೇಶ್ ಉಗ್ರನರಸಿಂಹ, ಶ್ರೀರಾಮ ಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಭಾರಿ ಗಂಗಾಧರ, ವಂದೇ ಮಾತರಂ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಮಾಲತೇಶ್ ಅರಸ್, ಸಮಸ್ತ ವಿಶ್ವ ಧರ್ಮರಕ್ಷಾ ಸೇನಾ ಸಂಸ್ಥಾಪಕ ಯೋಗಿ ಸಂಜೀತ್
ಸುವರ್ಣ ಇದ್ದರು.