ಡಿಸ್ಕಸ್ ಥ್ರೋ: ಅಂತಿಮ ಸುತ್ತಿಗೆ ಭಾರತದ ಕಮಲ್ಪ್ರೀತ್ ಕೌರ್!
ಟೋಕಿಯೋ : ಜಪಾನಿನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಿನ್ನೆಯಿಂದ ಅಥ್ಲೆಟಿಕ್ ಸ್ಪರ್ಧೆಗಳು ಆರಂಭವಾಗಿವೆ. ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಭಾರತದ ಹಲವು ಪ್ರತಿಭಾವಂತ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.
ಇಂದು ನಡೆದ ಮಹಿಳೆಯರ ಡಿಸ್ಕಸ್ ಥ್ರೋನ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಭಾರತದ ಕಮಲ್ಪ್ರೀತ್ ಕೌರ್ ಎರಡನೇ ಸ್ಥಾನ ಗಳಿಸಿದ್ದಾರೆ. ತನ್ಮೂಲಕ ಅವರು ಡಿಸ್ಕಸ್ ಥ್ರೋ ಈವೆಂಟ್ನ ಅಂತಿಮ (ಫೈನಲ್ಸ್) ಸುತ್ತನ್ನು ಪ್ರವೇಶಿಸಿದ್ದಾರೆ. ಅಂತಿಮ ಸ್ಪರ್ಧೆ ಆಗಸ್ಟ್ 2 ನೇ ತಾರೀಕಿನಂದು ನಡೆಯಲಿದೆ.
ಟೋಕಿಯೋದ ಮುಖ್ಯ ಕ್ರೀಡಾಂಗಣದಲ್ಲಿ ನಡೆದ ಅರ್ಹತಾ ಸುತ್ತು ಬಿ ಸ್ಪರ್ಧೆಯಲ್ಲಿ ಭಾಗವಹಿಸಿದ 25 ವರ್ಷ ವಯಸ್ಸಿನ ಕೌರ್, 64 ಮೀಟರ್ ದೂರಕ್ಕೆ ಡಿಸ್ಕಸ್ ಎಸೆದು, ಆಟೋಮ್ಯಾಟಿಕ್ ಆಗಿ ಅಂತಿಮ ಸುತ್ತಿಗೆ ಕ್ವಾಲಿಫೈ ಆದರು. ಇವರಿಗೂ ಸ್ವಲ್ಪ ಹೆಚ್ಚು ದೂರ ಎಸೆದು ಪ್ರಥಮ ಸ್ಥಾನ ಗಳಿಸಿ ಕ್ವಾಲಿಫೈ ಆದ ಆಟಗಾರರೆಂದರೆ ಅಮೆರಿಕದ ವಾಲರೀ ಆಲ್ಮನ್ - ಅವರು ಎಸೆದ ದೂರ 66.42 ಮೀಟರ್.
ಕಳೆದ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದಿದ್ದ ಕ್ರೊಯೇಷಿಯಾದ ಸ್ಯಾಂಡ್ರಾ ಪೆರ್ಕೊವಿಕ್(63.75ಮೀ.) ಮತ್ತು ಹಾಲಿ ವರ್ಲ್ಡ್ ಚ್ಯಾಂಪಿಯನ್ ಆದ ಕ್ಯೂಬಾದ ಯೈಮೆ ಪೆರೆಜ್(63.18ಮೀ.) ಅವರಿಗಿಂತ ಹೆಚ್ಚು ದೂರವನ್ನು ಕಮಲ್ಪ್ರೀತ್ ಕೌರ್ ಅವರು ಸಾಧಿಸಿದ್ದು, ಉತ್ತಮ ಆಟಗಾರಿಕೆ ಪ್ರದರ್ಶಿಸಿದ್ದಾರೆ. ಭಾರತದ ಮತ್ತೊಬ್ಬ ಅಥ್ಲೀಟ್ ಆದ ಸೀಮಾ ಪೂನಿಯ ಅವರು 60.57 ಮೀ ಎಸೆತ ಸಾಧಿಸಿ, ಹಿಂದುಳಿದಿದ್ದಾರೆ.