ಶಿವಮೊಗ್ಗ: ಯುವತಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

ಶಿವಮೊಗ್ಗ: ಯುವತಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

ಶಿವಮೊಗ್ಗ, ಆ.27: ಪ್ರೀತಿಸಿದ ಯುವತಿಯನ್ನು ಹತ್ಯೆಗೈದು ನಂತರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಇದೀಗ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಶಿವಮೊಗ್ಗದ ಖಾಸಗಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿನಿ ಕವಿತಾ (22) ಎಂಬಾಕೆಯನ್ನು ಆಕೆಯ ಸ್ನೇಹಿತ ರಿಪ್ಪನ್ ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಶಿವಮೂರ್ತಿ ಕೊಲೆ ಮಾಡಿದ್ದಾನೆ. ಬಳಿಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದ. ಸ್ನೇಹಿತರ ಮೂಲಕ ವಿಚಾರ ತಿಳಿದು ಕುಟುಂಬದವರು ಶಿವಮೂರ್ತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಬುಧವಾರ ಮಧ್ಯಾಹ್ನ 12 ಗಂಟೆಗೆ ಕವಿತಾಳನ್ನು ನೇರಲಿಗೆ ಅರಣ್ಯ ಪ್ರದೇಶಕ್ಕೆ ಕರೆತಂದ ಶಿವಮೂರ್ತಿ, ಆಕೆಯೊಂದಿಗೆ ಮಾತನಾಡಿದ್ದಾನೆ. ಬಳಿಕ ವೇಲ್‌ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ಆಕೆ ಕೊನೆಯುಸಿರೆಳೆದ ನಂತರ ಶಿವಮೂರ್ತಿ ಕ್ರಿಮಿನಾಶಕ ಸೇವಿಸಿರುವ ಸಾಧ್ಯತೆ ಇದೆ. ಅದರ ಬಾಟಲಿ ಕೂಡ ಕವಿತಾಳ ಮೃತದೇಹದ ಪಕ್ಕದಲ್ಲಿ ಪತ್ತೆಯಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಸಾವು:

ಶಿವಮೂರ್ತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರಂಭದಲ್ಲಿ ಚಿಕಿತ್ಸೆಗೆ ಸ್ಪಂದಿಸಿದ್ದ ಶಿವಮೂರ್ತಿ, ಆ ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲೇ ಶಿವಮೂರ್ತಿ ಕೊನೆಯುಸಿರೆಳೆದಿದ್ದಾನೆ. ಈ ಮಧ್ಯೆ ಕವಿತಾಳ ಪೋಷಕರು ಶಿವಮೂರ್ತಿ ವಿರುದ್ಧ ರಿಪ್ಪನ್'ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ತಮ್ಮ ಮಗಳ ಸ್ನೇಹಿತ ಶಿವಮೂರ್ತಿ ಆಕೆಯ ಹತ್ಯೆಗೈದಿದ್ದಾನೆ ಎಂದು ದೂರಿದ್ದರು.

ಇಬ್ಬರ ಪರಿಚಯವಾಗಿದ್ದು ಹೇಗೆ?

ಶಿವಮೂರ್ತಿಯು ಹೊಸನಗರ ತಾಲೂಕಿನ ತಳಲೆಯ ಕಗಲಿಜೆಡ್ಡು ಗ್ರಾಮದವನು. ಕವಿತಾ ಸಾಗರ ತಾಲೂಕು ಭಾನುಕುಳಿ ಗ್ರಾಮದ ಹೆಬ್ಬನಕೆರೆಯವಳು. ಊರಲ್ಲಿ ಓದಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ರಿಪ್ಪನ್ ಪೇಟೆಯಲ್ಲಿರುವ ಸಂಬಂಧಿಕರ ಮನೆಲ್ಲಿದ್ದು ಓದುತ್ತಿದ್ದಳು. ಬಳಿಕ ಬಿಸಿಎಂ ಹಾಸ್ಟೆಲ್ ಸೇರಿ ಓದು ಮುಂದುವರೆಸಿದ್ದಳು. ರಿಪ್ಪನ್ ಪೇಟೆಯ ಪದವಿ ಪೂರ್ವ ಕಾಲೇಜಿನಲ್ಲಿ ಓದುವಾಗ ಕವಿತಾಗೆ ಶಿವಮೂರ್ತಿಯ ಪರಿಚಯವಾಗಿತ್ತು. ಪರಿಚಯ ಪ್ರೀತಿಯಾಗಿತ್ತು ಎಂದು ಹೇಳಲಾಗುತ್ತಿದೆ. ನಂತರ ಕವಿತಾ ಶಿವಮೊಗ್ಗದ ಖಾಸಗಿ ನರ್ಸಿಂಗ್ ಕಾಲೇನಲ್ಲಿ ವಿದ್ಯಭ್ಯಾಸ ಆರಂಭಿಸಿದ್ದಳು.