ಗ್ಯಾಂಗ್‌ ರೇಪ್‌- ಐದು ಆರೋಪಿಗಳ ಬಂಧನ: ಪ್ರವೀಣ್ ಸೂದ್

ಗ್ಯಾಂಗ್‌ ರೇಪ್‌- ಐದು ಆರೋಪಿಗಳ ಬಂಧನ: ಪ್ರವೀಣ್ ಸೂದ್

ಮೈಸೂರು: ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

'ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ತಮಿಳುನಾಡಿನ ತಿರ್ಪುರ್ ಮೂಲದವರಾಗಿದ್ದು ಕೂಲಿ ಕಾರ್ಮಿಕರು ಹಾಗೂ ಬಹುತೇಕ ಅನಕ್ಷರಸ್ಥರಾಗಿದ್ದಾರೆ. ಚಾಲಕ, ಕಾರ್ಪೆಂಟರ್, ಕೂಲಿ ಕೆಲಸ ಮಾಡುತ್ತಿದ್ದರು. ಮೈಸೂರಿಗೆ ತರಕಾರಿ ತೆಗೆದುಕೊಂಡು ಆಗಾಗ ಬರುತ್ತಿದ್ದರು. ಅವರಿಂದ ಈ ಕುಕೃತ್ಯ ನಡೆದಿದ್ದು ಅದರಲ್ಲಿ 17 ವರ್ಷದ ಒಬ್ಬ ಬಾಲ ಆರೋಪಿ ಕೂಡ ಇದ್ದಾನೆ' ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಹೆಚ್ಚಿನ ವಿವರ ನೀಡಲು ಈ ಸಂದರ್ಭದಲ್ಲಿ ಸಾಧ್ಯವಿಲ್ಲ. ಮೈಸೂರಿಗೆ ಆಗಾಗ ಬರುತ್ತಿದ್ದ ಈ ಆರೋಪಿಗಳು ಬಂದು ಹೋಗುವಾಗ ಮದ್ಯಪಾನ ಮಾಡಿಕೊಂಡು ಪಾರ್ಟಿ ಮಾಡಿಕೊಂಡು ಹೋಗುತ್ತಿದ್ದರು. ಆಗಸ್ಟ್ 24ರಂದು ಅತ್ಯಾಚಾರದಂತಹ ಹೀನಕೃತ್ಯ ನಡೆಸಿದ್ದಾರೆ ಎಂದು ತಿಳಿಸಿದರು.

ಸಾಮೂಹಿಕ ಅತ್ಯಾಚಾರದಲ್ಲಿ 6 ಮಂದಿ ಭಾಗಿಯಾಗಿದ್ದು ಒಬ್ಬ ತಲೆಮರೆಸಿಕೊಂಡಿದ್ದಾನೆ, ಆತನ ಶೀಘ್ರ ಬಂಧನಕ್ಕೆ ಹುಡುಕಾಟ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಯುವತಿ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ ಎಂದರು.