ಸಾರಿಗೆ ಇಲಾಖೆಯಲ್ಲಿ ಕ್ಲರಿಕಲ್ ಸಿಬ್ಬಂದಿಗೆ ತರಾತುರಿ ಬಡ್ತಿ: ಇಂದು ಕಮಿಷನರ್ ಕಚೇರಿಯಲ್ಲಿ ಮುಂಬಡ್ತಿ ಸಮಿತಿ ಸಭೆ
ಬೆಂಗಳೂರು: 15 ; ವರ್ಷ ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ 105 ಮೋಟಾರು ವಾಹನ ನಿರೀಕ್ಷಕರಿಗೆ ಮುಂಬಡ್ತಿ ನೀಡುವಂತೆ ಸುಪ್ರೀಂಕೊರ್ಟ್ ಆದೇಶಿಸಿದ್ದರೂ ಪಾಲಿಸಲು ಮೀನಮೇಷ ಎಣಿಸುತ್ತಿರುವ ಸಾರಿಗೆ ಇಲಾಖೆ, ತರಾತುರಿಯಲ್ಲಿ ಕ್ಲರಿಕಲ್ ಸಿಬ್ಬಂದಿಗೆ ಮೋಟಾರು ವಾಹನ ನಿರೀಕ್ಷಕ ಹುದ್ದೆಗೆ ಬಡ್ತಿ ಕೊಡಲು ಮುಂದಾಗಿರುವ ವಿಚಾರ ಬೆಳಕಿಗೆ ಬಂದಿದೆ.
2008ರಲ್ಲಿ ಸೇರ್ಪಡೆಯಾಗಿರುವ 105 ಮೋಟಾರು ವಾಹನ ನಿರೀಕ್ಷಕರ ನೇಮಕಾತಿಯನ್ನು ಸಿಂಧುಗೊಳಿಸಿ ಮುಂಬಡ್ತಿ ನೀಡುವಂತೆ 2022 ಆ.30ರಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ, ಆದೇಶವಾಗಿ ಎರಡೂವರೆ ತಿಂಗಳು ಕಳೆದರೂ ಮುಂಬಡ್ತಿ ಪ್ರಕ್ರಿಯೆಯೇ ಆರಂಭವಾಗಿಲ್ಲ. ಈ ಮಧ್ಯೆ ಆರ್ಟಿಒ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಕ್ಲರಿಕಲ್ ಸಿಬ್ಬಂದಿಗೆ ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಬಡ್ತಿ ಕೊಡಲು ಇನ್ನಿಲ್ಲದ ಕಾಳಜಿ ತೋರುತ್ತಿದ್ದು, ಮಂಗಳವಾರ ಬೆಳಗ್ಗೆ 11.30ಕ್ಕೆ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಇಲಾಖಾ ಮುಂಬಡ್ತಿ ಸಮಿತಿ ಸಭೆ ಕರೆದಿದೆ. ಕರ್ನಾಟಕ ಸಾಮಾನ್ಯ ಸೇವೆಗಳು (ಮೋಟಾರು ವಾಹನ ಶಾಖೆ) ನೇಮಕಾತಿ ನಿಯಮ -2021ರ ಅನ್ವಯ ಶೇ.95 ಹುದ್ದೆ ನೇರ ನೇಮಕಾತಿ ಹಾಗೂ ಶೇ.5 ಹುದ್ದೆ ಇನ್ಸರ್ವೀಸ್ ಅಭ್ಯರ್ಥಿಗಳಿಗೆ ಕೋಟಾ ಮೀಸಲಾಗಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಮಾತ್ರ ಇನ್ಸರ್ವೀಸ್ ಅಭ್ಯರ್ಥಿಗಳ ನೇಮಕಾತಿಗೆ ಅವಕಾಶ ಇತ್ತು. ಆದರೆ, ವಾಮಮಾರ್ಗದಲ್ಲಿ ಇನ್ಸರ್ವೀಸ್ ಅಭ್ಯರ್ಥಿಗಳಿಗೆ ಬಡ್ತಿ ಕೊಡಲು ಅವಕಾಶ ಕಲ್ಪಿಸಲೆಂದೇ 2022ರ ನೇಮಕಾತಿ ನಿಯಮಕ್ಕೆ ತಿದ್ದುಪಡಿ ತಂದು ಸಚಿವ ಸಂಪುಟದಲ್ಲಿ ಅನುಮೋದನೆ ಕೊಡಲಾಗಿದೆ.
ಸಿ ಗ್ರೂಪ್ನ ಎಫ್ಡಿಎ, ಶೀಘ್ರಲಿಪಿಗಾರ, ಹಿರಿಯ ಬೆರಳಚ್ಚುಗಾರ ಹಾಗೂ ಹಿರಿಯ ಚಾಲಕರಿಗೆ ಹಿರಿಯ ಮೋಟಾರು ವಾಹನ ನಿರೀಕ್ಷಕ ಹುದ್ದೆಗೆ ಮುಂಬಡ್ತಿ ಕೊಟ್ಟರೆ ಹೊಸದಾಗಿ ನೇಮಕಾತಿ ಕನಸು ಕಂಡಿರುವ ನಿರುದ್ಯೋಗಿ ಯುವಕರಿಗೆ ಅನ್ಯಾಯವಾಗುತ್ತದೆ. ಅಲ್ಲದೆ, ಸರ್ಕಾರ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಸಿ ಗ್ರೂಪ್ ನೌಕರರಿಗೆ ಬಡ್ತಿ ಕೊಡಲು ತೋರಿಸುತ್ತಿರುವ ಆಸಕ್ತಿ 15 ವರ್ಷ ಒಂದೇ ಹುದ್ದೆಯಲ್ಲಿರುವ ಬ್ರೇಕ್ ಇನ್ಸ್ಪೆಕ್ಟರ್ಗಳ ಬಡ್ತಿಗೆ ತೋರಿಸದಿರುವ ಬಗ್ಗೆ ಅಧಿಕಾರಿಗಳ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಬಡ್ತಿಗೆ ಒಂದೂ ಸಭೆ ಕರೆದಿಲ್ಲ: ಸುಪ್ರೀಂಕೋರ್ಟ್ ಆದೇಶಿಸಿ ಎರಡೂವರೆ ತಿಂಗಳು ಕಳೆದರೂ 105 ಇನ್ಸ್ಪೆಕ್ಟರ್ಗಳ ಮುಂಬಡ್ತಿ ಪ್ರಕ್ರಿಯೆಯೇ ಆರಂಭವಾಗಿಲ್ಲ. ಬಡ್ತಿಗೆ ಅರ್ಹತೆ ಹೊಂದಿರುವ ಇನ್ಸ್ಪೆಕ್ಟರ್ಗಳ ಕುರಿತು ಗೌಪ್ಯ ಸೇವಾವಧಿ ವರದಿ (ಕಾನ್ಪೆಡೆನ್ಶಿಯಲ್ ಸರ್ವೀಸ್ ರೆಕಾರ್ಡ್ಸ್) ಕೇಳಿರುವುದನ್ನು ಬಿಟ್ಟರೆ ಮುಂಬಡ್ತಿ ಸಮಿತಿ ಒಂದೇ ಒಂದು ಸಭೆಯನ್ನೂ ಕರೆದಿಲ್ಲ. ಆದರೆ, ಸಿ ಗ್ರೂಪ್ ನೌಕರರಿಗೆ ಮುಂಬಡ್ತಿ ಕೊಡಲು ಇನ್ನಿಲ್ಲದ ಕಾಳಜಿ ವಹಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳ ನಡೆ ಬಗ್ಗೆ ಬ್ರೇಕ್ ಇನ್ಸ್ಪೆಕ್ಟರ್ಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಅನುಕಂಪದ ಆಧಾರದ ಹುದ್ದೆ: ಮೋಟಾರು ವಾಹನ ನಿರೀಕ್ಷಕ ಹುದ್ದೆಗೆ ಬಡ್ತಿ ಹೊಂದಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾನ್ಯತೆ ಹೊಂದಿರುವ 3 ವರ್ಷಗಳ ಅವಧಿಯ ಅಟೋಮೊಬೈಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಆಗಿರಬೇಕು. ಅಂತಹ ಎಫ್ಡಿ, ಶೀಘ್ರಲಿಪಿಗಾರ, ಬೆರಳಚ್ಚುಗಾರ ಹಾಗೂ ಹಿರಿಯ ಚಾಲಕನಿಗೆ ಬಡ್ತಿಗೆ ಪರಿಗಣಿಸಲಾಗುತ್ತದೆ. ಈ ಹುದ್ದೆಗಳಲ್ಲಿರುವ ಹಲವರು ತಂದೆಯ ಸಾವಿನ ನಂತರ ಅನುಕಂಪದ ಆಧಾರದಲ್ಲಿ ಹುದ್ದೆ ಗಿಟ್ಟಿಸಿಕೊಂಡವರಿದ್ದಾರೆ.
430ರಲ್ಲಿ 323 ಹುದ್ದೆಗಳು ಖಾಲಿ: ರಾಜ್ಯದಲ್ಲಿ 67 ಆರ್ಟಿಒ ಕಚೇರಿಗಳಿದ್ದು, 430 ಮೋಟಾರು ವಾಹನ ನಿರೀಕ್ಷಕ ಹುದ್ದೆಗಳು ಮಂಜೂರಾಗಿವೆ. ಆದರೆ, ಸದ್ಯ 107 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 323 ಹುದ್ದೆಗಳು ಖಾಲಿ ಉಳಿದಿವೆ. ಕೂಡಲೇ ಕೆಪಿಎಸ್ಸಿ ಮೂಲಕ ಈ ಖಾಲಿ ಹುದ್ದೆಗಳ ನೇಮಕಾತಿಗೆ ಸಾರಿಗೆ ಇಲಾಖೆ ಅರ್ಜಿ ಆಹ್ವಾನ ಮಾಡಬೇಕು. ಕೆಲಸಕ್ಕಾಗಿ ಕಾಯುತ್ತಿರುವ ನಿರುದ್ಯೋಗ ಯುವಕರಿಗೆ ಆಸೆಯಾಗುತ್ತದೆ ಎಂಬುದು ಅಧಿಕಾರಿಗಳ ಒತ್ತಾಯ.
ಬಡ್ತಿ ಪ್ರಕ್ರಿಯೆಯಲ್ಲಿ ಲಂಚದ ವಾಸನೆ: ಕ್ಲರಿಕಲ್ ಸಿಬ್ಬಂದಿ ಬಡ್ತಿಗೆ ತರಾತುರಿ ತೋರುತ್ತಿರುವ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ 6 ಮಂದಿಗೆ ಬಡ್ತಿ ಕೊಡಲು ಸಿದ್ಧತೆ ನಡೆದಿದೆ. ಇವರಿಂದ ಲಂಚ ಪಡೆದು ಮುಂಬಡ್ತಿ ಕೊಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.