ಮುಖ್ಯಮಂತ್ರಿ ಬದಲಾವಣೆ ನೂರಕ್ಕೆ ನೂರರಷ್ಟು ಸತ್ಯ,ಬಿಜೆಪಿಯಲ್ಲಿ ಇನ್ನೂ ಇಬ್ಬರು ಸಿಎಂ ಆಗುತ್ತಾರೆ: ಶಿವರಾಜ್ ತಂಗಡಗಿ
ಕೊಪ್ಪಳ: ಜನವರಿ ಅಂತ್ಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧಿಕಾರ ಹೋಗುತ್ತದೆ, ಈ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಸಿಕ್ಕಿದೆ. ಇನ್ನು ಒಂದೂವರೆ ವರ್ಷದಲ್ಲಿ ರಾಜ್ಯಕ್ಕೆ ಇಬ್ಬರು ಸಿಂ ಆಗುತ್ತಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಶಿವರಾಜ್ ತಂಗಡಗಿ ಬಾಂಬ್ ಸಿಡಿಸಿದ್ದಾರೆ.
ನಿನ್ನೆ ಕಲಬುರಗಿಯಲ್ಲಿ ಮಾತನಾಡಿದ್ದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಿಟ್ ಕಾಯಿನ್ ಹಗರಣ ಬಗ್ಗೆ ಸಮಗ್ರವಾಗಿ ಪಾರದರ್ಶಕವಾಗಿ ತನಿಖೆಯಾದರೆ ಸಿಎಂ ಪದವಿ ಕಳೆದುಕೊಳ್ಳುತ್ತಾರೆ, ಇದರಲ್ಲಿ ಹಲವು ಬಿಜೆಪಿ ನಾಯಕರು, ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಹೇಳಿದ್ದರು.
ಇದೀಗ ಅದೇ ಧಾಟಿಯಲ್ಲಿ ಶಿವರಾಜ್ ತಂಗಡಗಿ ಕೂಡ ಮಾತನಾಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ನೂರಕ್ಕೆ ನೂರು ಸತ್ಯ, ಇನ್ನು ಒಂದೂವರೆ ವರ್ಷದ ಬಿಜೆಪಿ ಆಡಳಿತಾವಧಿಯಲ್ಲಿ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳಾಗುತ್ತಾರೆ. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮೂವರು ಮುಖ್ಯಮಂತ್ರಿಯಾಗಿದ್ದರು. ಅವರಿಗೆ ಸಿಂಗಲ್ ಆಗಿ ಆಡಳಿತ ಮಾಡಲು ಆಗುವುದೇ ಇಲ್ಲ, ಅಷ್ಟು ಸಾಮರ್ಥ್ಯ ಬಿಜೆಪಿ ನಾಯಕರಿಗಿಲ್ಲ ಎಂದರು.
ಬಿಟ್ ಕಾಯಿನ್ ದಂಧೆ ಬಗ್ಗೆ ಮಾತನಾಡಿದರೆ, ಆರೋಪ ಮಾಡಿದರೆ ಸಾಕ್ಷ್ಯಾಧಾರ ಕೊಡಿ, ದಾಖಲೆ ಪ್ರತಿ ಕೊಡಿ ಎಂದು ಕೇಳುತ್ತಾರೆ, ಆರೋಪ ಮಾಡುವವರು ದಾಖಲೆ ಕೊಡಬೇಕೆಂದರೆ ಸರ್ಕಾರವೇಕೆ, ತನಿಖಾ ಸಂಸ್ಥೆಗಳಿರುವುದೇಕೆ ಎಂದು ತಂಗಡಗಿ ಪ್ರಶ್ನಿಸಿದರು.
ಬಿಟ್ ಕಾಯಿನ್ ಬಗ್ಗೆ ಅಧಿವೇಶನದಲ್ಲಿ ಚರ್ಚೆ: ಮುಂಬರುವ ಚಳಿಗಾಲ ಅಧಿವೇಶನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಬಿಟ್ ಕಾಯಿನ್ ಹಗರಣವನ್ನು ಸದನದಲ್ಲಿ ಪ್ರಸ್ತಾಪಿಸಲಿದ್ದಾರೆ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.