ಆ ಹಸುವಿನ ಹೊಟ್ಟೆಯಲ್ಲಿತ್ತು ಬರೊಬ್ಬರಿ 75 ಕೆಜಿ ಪ್ಲಾಸ್ಟಿಕ್

ಪ್ಲಾಸ್ಟಿಕ್ ಎಂಬುದು ಜೀವ ಸಂಕುಲಕ್ಕೆ ಮಾರಕವಾದ ವಸ್ತುವಾಗಿದೆ. ಎಲ್ಲೆಂದರಲ್ಲಿ ಬಿಸಾಡುವುದರಿಂದ ತುಂಬಾ ಅಪಾಯ ಎದುರಿಸುವಂತಾಗುತ್ತದೆ. ಇದಕ್ಕೆ ಪೂರಕ ಎಂಬಂತೆ ಧಾರವಾಡದಲ್ಲಿ ಹಸುವೊಂದು ಪ್ಲಾಸ್ಟಿಕ್ ತಿಂದು ಅಸುನೀಗಿದೆ. ಧಾರವಾಡದ ಪ್ರಮುಖ ಬೀದಿಗಳಲ್ಲಿ ಓಡಾಡುವ ಹಸುಗಳು ಮಾರ್ಕೇಟ್ ಪ್ರದೇಶದಲ್ಲಿ ಬಿಸಾಡಿರುವ ಪ್ಲಾಸ್ಟಿಕ್ ತಿನ್ನುತ್ತವೆ. ಸದ್ಯ ಅಸುನೀಗಿದ ಹಸವಿನ ಹೊಟ್ಟೆಯಲ್ಲಿ ಬರೊಬ್ಬರಿ 75 ಕೆಜಿ ಪ್ಲಾಸ್ಟಿಕ್ ಪತ್ತೆಯಾಗಿದೆ. ಕಲ್ಯಾಣ ನಗರ ಬಡಾವಣೆಯಲ್ಲಿ ಹಸುವೊಂದು ಅಸ್ವಸ್ಥಗೊಂಡಿತ್ತು. ಆಗ ಸ್ಥಳೀಯರು ಪ್ರಾಣಿ ಪಕ್ಷಿ ರಕ್ಷಕ ಸೋಮಶೇಖರ ಚನ್ನಶೆಟ್ಟಿಯವರ ಗಮನಕ್ಕೆ ತಂದ ಬಳಿಕ ಅವರು ಬಂದು ನೋಡಿದಾಗ, ಗ್ಯಾಸ್ಟ್ರಿಕ್ನಿಂದ ಹೊಟ್ಟೆ ಹೀಗೆ ಆಗಿರಬಹುದು ಎಂದು ಅಂದಾಜಿಸಿದ್ದರು. ಪಶು ವೈದ್ಯರನ್ನು ಕರೆಯಿಸಿ ಪರಿಶೀಲಿಸಿದಾಗ ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಸಿಕ್ಕಿ ಹಾಕಿಕೊಂಡಿರೋದು ಪತ್ತೆಯಾಗಿತ್ತು. ಆಪರೇಷನ್ ಮಾಡಿ ಹಸುವಿನ ಹೊಟ್ಟೆಯಿಂದ ಸುಮಾರು 75 ಕೆಜಿ ಪ್ಲಾಸ್ಟಿಕ್ ತೆಗೆಯಲಾಗಿದೆ. ಆದರೆ, ಹಸು ಮಾತ್ರ ಬದುಕುಳಿದಿಲ್ಲ. ಅಸುನಿಗೀರುವ ಹಸುವಿನಂತೆ ನೂರಾರು ಹಸುಗಳು ಧಾರವಾಡದಲ್ಲಿ ಹೊಟ್ಟೆ ಊದಿಸಿಕೊಂಡು ಓಡಾಡುತ್ತಿದ್ದು, ಅವುಗಳ ಪರಿಸ್ಥಿತಿಯೂ ಹೀಗಾಗುತ್ತದೆ ಎಂಬ ಆತಂಕ ಸ್ಥಳೀಯರಲ್ಲಿ ಕಾಡುತ್ತಿದೆ. ಒಂದೇ ಹಸುವಿನ ಹೊಟ್ಟೆಯಲ್ಲಿ 75 ಕೆಜಿಯಷ್ಟು ಭಾರೀ ಪ್ರಮಾಣದ ಪ್ಲ್ಯಾಸ್ಟಿಕ್ ಪತ್ತೆಯಾಗಿದ್ದು, ಪ್ರಾಣಿ ಪ್ರಿಯರಲ್ಲೀಗ ಆತಂಕವನ್ನುಂಟು ಮಾಡಿದೆ.