ರಾಯಚೂರು ಜಿಲ್ಲೆಯಲ್ಲಿ ದಿಢೀರ್ ಬದಲಾದ ವಾತಾವರಣ

ರಾಯಚೂರು, ಜನವರಿ, 02: ಕಳೆದೊಂದು ವಾರದಿಂದ ತಾಲೂಕಿನಾದ್ಯಂತ ಮುಂಜಾನೆ ದಟ್ಟನೆಯ ಮಂಜು, ಮಧ್ಯಾಹ್ನ ಬಿಸಿಲು, ಸಂಜೆ ಇಬ್ಬನಿ ಮುಚ್ಚಿದ ವಾತಾವರಣವು ಜನರ ಮೈಮನ ತಣಿಸುತ್ತಿದೆ. ಈ ಚುಮುಚುಮು ಚಳಿಯಿಂದ ಜನರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಹಾಗೆಯೇ ಮಂಜಿನ ಹನಿಗಳು ಬೆಳೆಗಳಿಗೆ ಪೂರಕವಾದರೆ, ಮತ್ತೊಂದೆಡೆ ಹೊಗೆಯಂತಹ ಮಂಜು ಮುಚ್ಚಿದ ವಾತಾವರಣ ಬೆಳೆಗಳ ಮೇಲೆ ತುಂಬಾ ಪ್ರಭಾವ ಬೀರಲಿದೆ ಎಂದು ಇಲ್ಲಿನ ರೈತರು ಹೇಳುತ್ತಿದ್ದಾರೆ.
ಮಂಜು ಮುಸುಕಿದ ವಾತಾವರಣದಿಂದ ವಾಹನಗಳ ಚಾಲನೆ ಮತ್ತು ವಾಯು ವಿಹಾರಕ್ಕೆ ಕೊಂಚ ಅಡ್ಡಿಯಾಗಿದೆ. ನಿತ್ಯ ವಾಯು ವಿಹಾರಕ್ಕೆ ಹೋಗುತ್ತಿದ್ದ ನಾಗರಿಕರು ಕೂಡ ಈ ಮಂಜು ಮುಸುಕಿದ ವಾತಾವರಣವನ್ನು ನೋಡಿ ಕಂಗಾಲಾಗಿದ್ದಾರೆ. ಇಬ್ಬನಿ ಕೊಂಚ ಕಡಿಮೆ ಆದಮೇಲೆ ತಡವಾಗಿ ವಿಹಾರಕ್ಕೆ ತೆರಳುವಂತಹ ವಾತಾವರಣ ನಿರ್ಮಾಣವಾಗಿದೆ. ಬೆಳಗಿನ ಜಾವ ಮತ್ತು ಸಂಜೆ ಮಂಜು ಮುಸುಕಿದ ವಾತಾವರಣ ನಿರ್ಮಾಣ ಆಗುತ್ತಿದ್ದು, ರಸ್ತೆಗಳ ಮೇಲೆ ಸಂಚರಿಸುವ ದ್ವಿಚಕ್ರ ಹಾಗೂ ಲಘು ವಾಹನ ಸವಾರರು ಲೈಟ್ ಹಾಕಿಕೊಂಡೇ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.