ಕ್ವಿಂಟನ್ ಡಿ ಕಾಕ್ ಅನುಪಸ್ಥಿತಿ: ಕೆಎಲ್ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸುವವರು ಯಾರು?

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆರಂಭಕ್ಕೆ ಮುನ್ನವೇ ಹಲವು ತಂಡಗಳಿಗೆ ಹಿನ್ನಡೆಯಾಗಿದೆ. ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ ತಂಡದ ಹಲವು ಆಟಗಾರರು ಆರಂಭದ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಆರಂಭದ ಕೆಲವು ಪಂದ್ಯಗಳಿಗೆ ಅಲಭ್ಯರಾಗಿರಲಿದ್ದಾರೆ.
ದಕ್ಷಿಣ ಆಫ್ರಿಕಾ ತಂಡವು ಮಾರ್ಚ್ 31 ಮತ್ತು ಏಪ್ರಿಲ್ 2ರಂದು ನೆದರ್ಲ್ಯಾಂಡ್ಸ್ ವಿರುದ್ಧ ಎರಡು ಐಸಿಸಿ ವಿಶ್ವಕಪ್ ಅರ್ಹತಾ 50 ಓವರ್ ಗಳ ಪಂದ್ಯಗಳನ್ನು ಆಡಲಿದ್ದು, ಪ್ರಮುಖ ಆಟಗಾರರು ತಮ್ಮ ಐಪಿಎಲ್ ಪಂದ್ಯಗಳಿಗೆ ಆರಂಭದ ಕೆಲವು ಪಂದ್ಯಗಳಲ್ಲಿ ಲಭ್ಯವಿರುವುದಿಲ್ಲ.
ಲಕ್ನೋ ಸೂಪರ್ ಜೈಂಟ್ಸ್ ತನ್ನ ಮೊದಲ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ಅವರ ಸೇವೆಯನ್ನು ಕಳೆದುಕೊಂಡರೆ, ಎದುರಾಳಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಅನ್ರಿಚ್ ನೋಕಿಯಾ ಮತ್ತು ಲುಂಗಿ ಎನ್‌ಗಿಡಿ ಅವರ ಅನುಪಸ್ಥಿಯನ್ನು ಎದುರಿಸಲಿದೆ.
ತಂಡದಲ್ಲಿ ಹಲವು ಬದಲಾವಣೆ
ಕ್ವಿಂಟನ್ ಡಿ ಕಾಕ್ ಅನುಪಸ್ಥಿತಿಯಲ್ಲಿ ಕೈಲ್ ಮೇಯರ್ಸ್ ಆರಂಭಿಕರಾಗಿ ಆಡುವುದು ಅತ್ಯುತ್ತಮ ಆಯ್ಕೆಯಾಗಿದೆ. ಎಡಗೈ ಬ್ಯಾಟರ್ ಆಗಿರುವ ಅವರು, ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 135 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ 27 ಎಸೆತಗಳಲ್ಲಿ51 ರನ್ ಗಳಿಸುವ ಮೂಲಕ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬಲಗೈ ಮತ್ತು ಎಡಗೈ ಕಾಂಬಿನೇಷನ್ ಉತ್ತಮ ಆಯ್ಕೆಯಾಗಲಿದೆ.
ಒಂದು ವೇಳೆ ತಂಡದ ಬೌಲಿಂಗ್ ವಿಭಾಗವನ್ನು ಶಕ್ತಿಯುತವಾಗಿಸಲು ಆರ್ಸೆನಲ್ ಅವರು ಆಡುವ ಬಳಗದಲ್ಲಿ ಸೇರ್ಪಡೆಯಾದರೆ, ಕೈಲ್ ಮೇಯರ್ಸ್ ಹೊರಗುಳಿಯಲಿದ್ದು, ದೀಪಕ್ ಹೂಡಾ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಕೂಡ ಇದೆ. ಟಿ20 ಮಾದರಿಯಲ್ಲಿ ಆರಂಭಿಕರಾಗಿ ಶತಕ ಗಳಿಸಿರುವ ದೀಪಕ್ ಹೂಡಾ ಅತ್ಯುತ್ತಮ ಬ್ಯಾಟರ್ ಆಗಿದ್ದಾರೆ. ಪವರ್ ಪ್ಲೇನಲ್ಲಿ ಸ್ಫೋಟಕ ಬ್ಯಾಟಿಂಗ್‌ನಿಂದ ಎದುರಾಳಿಗಳಿಗೆ ಮಾರಕವಾಗಬಲ್ಲರು.
ಬೌಲಿಂಗ್ ವಿಭಾಗದಲ್ಲಿ ಬದಲಾವಣೆ
ಏಪ್ರಿಲ್ 1ರಂದು ಲಕ್ನೋ ಸೂಪರ್ ಜೈಂಟ್ಸ್ ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲನೇ ಪಂದ್ಯವನ್ನಾಡಿದರೆ, ಎರಡನೇ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಏಪ್ರಿಲ್ ಮೂರರಂದು ಈ ಪಂದ್ಯ ನಡೆಯಲಿದ್ದು, ಚೆನ್ನೈನಲ್ಲಿ ಪಂದ್ಯ ನಡೆಯಲಿದೆ.
ಆರಂಭಿಕ ಪಂದ್ಯಗಳಲ್ಲಿ ಮೊಹ್ಸಿನ್ ಖಾನ್ ಅಲಭ್ಯರಾಗಲಿದ್ದಾರೆ. ಅವರು ದ್ವಿತೀಯಾರ್ಧದಲ್ಲಿ ಆಯ್ಕೆಗೆ ಲಭ್ಯವಾಗುವ ಸಾಧ್ಯತೆ ಇದೆ. ಜಯದೇವ್ ಉನಾದ್ಕತ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಪಂದ್ಯಾವಳಿಯ ಸಮಯದಲ್ಲಿ, ಜಮ್ಮು ಮತ್ತು ಕಾಶ್ಮೀರದ ಯುಧ್ವೀರ್ ಸಿಂಗ್ ಚರಕ್ ಅಥವಾ ವಿದರ್ಭದ ಯಶ್ ಠಾಕೂರ್, ಇವರಿಬ್ಬರೂ ತರಬೇತಿ ಅವಧಿಗಳಲ್ಲಿ ಗಮನ ಸೆಳೆದಿದ್ದಾರೆ, ಇಬ್ಬರೂ ತಂಡದ ಪರಿಸ್ಥಿತಿ ಮತ್ತು ಪಿಚ್ ಪರಿಸ್ಥಿತಿಗಳನ್ನು ಅವಲಂಬಿಸಿ ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದು.