ಸಿಎಸ್‌ಕೆ ತಂಡಕ್ಕೆ ಭಾರಿ ಹಿನ್ನಡೆ: ಪ್ರಮುಖ ವೇಗದ ಬೌಲರ್ ಆಡೋದು ಅನುಮಾನ

ಸಿಎಸ್‌ಕೆ ತಂಡಕ್ಕೆ ಭಾರಿ ಹಿನ್ನಡೆ: ಪ್ರಮುಖ ವೇಗದ ಬೌಲರ್ ಆಡೋದು ಅನುಮಾನ

2023ರ ಐಪಿಎಲ್‌ಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗಿ ಗಾಯಗೊಂಡಿದ್ದು, ಈ ಬಾರಿಯ ಐಪಿಎಲ್‌ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

ನ್ಯೂಜಿಲೆಂಡ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ವೇಗದ ಬೌಲರ್ ಕೈಲ್ ಜೇಮಿಸನ್ ಬೆನ್ನು ಒತ್ತಡದ ಮುರಿತಕ್ಕೆ ಒಳಗಾಗಿದ್ದಾರೆ.

ಜೇಮಿಸನ್ ಈಗಾಗಲೇ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದು, ಐಪಿಎಲ್‌ ಆಡೋದು ಅನುಮಾನವಾಗಿದೆ.

ಕಳೆದ ಎಂಟು ತಿಂಗಳಿನಿಂದ ಅವರು ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಒತ್ತಡದ ಮುರಿತ ಎಂದು ಹೇಳಲಾಗಿದೆ. ಜೇಮಿಸನ್‌ಗೆ ಸೀಸನ್‌ನ ಬದಲೀ ಆಟಗಾರರನ್ನು ಸಿಎಸ್‌ಕೆ ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ.

2022ರ ಜೂನ್‌ ತಿಂಗಳಿನಿಂದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿರಲಿಲ್ಲ. ಫೆಬ್ರವರಿ 16ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಅವರು ತಂಡಕ್ಕೆ ಆಯ್ಕೆಯಾಗಿದ್ದರು.

ಆದರೆ, ಮೌಂಟ್ ಮೌಂಗನುಯಿಯಲ್ಲಿ ನಡೆಯಲಿರು ಮೊದಲನೇ ಟೆಸ್ಟ್ ಪಂದ್ಯಕ್ಕೆ ಮುನ್ನ ನಡೆಸಿದ ವೈದ್ಯಕೀಯ ಪರೀಕ್ಷೆಗಳಲ್ಲಿ ಅವರು ಎರಡನೇ ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿರುವುದನ್ನು ಬಹಿರಂಗಪಡಿಸಿವೆ. ಹೆಚ್ಚಿನ ಪರೀಕ್ಷೆಗಾಗಿ ಜೇಮಿಸನ್ ಈಗ ಕ್ರೈಸ್ಟ್‌ಚರ್ಚ್‌ಗೆ ವಾಪಸಾಗಿದ್ದಾರೆ.

ಇಂಗ್ಲೆಂಡ್ ಪ್ರವಾಸದ ವೇಳೆಯಲ್ಲಿ ಸಮಸ್ಯೆ

2022ರಲ್ಲಿ ನ್ಯೂಜಿಲೆಂಡ್ ಇಂಗ್ಲೆಂಡ್‌ಗೆ ಪ್ರವಾಸ ಮಾಡಿದ ಸಂದರ್ಭದಲ್ಲಿ ಕೈಲ್ ಜೇಮಿಸನ್ ಬೆನ್ನು ನೋವಿಗೆ ತುತ್ತಾಗಿದ್ದರು. ನಂತರ ಅವರು ಸುದೀರ್ಘ ಅವಧಿಯವರೆಗೆ ಕ್ರಿಕೆಟ್‌ನಿಂದ ದೂರವುಳಿಯಬೇಕಾಯಿತು.

"ಕ್ರಿಕೆಟ್‌ಗೆ ವಾಪಸಾಗಲು ಕೈಲ್ ಜೇಮಿಸನ್ ಕಠಿಣ ಪರಿಶ್ರಮ ಪಟ್ಟ ನಂತರ ಈ ರೀತಿಯಾಗಿರುವುದು ಬೇಸರಕ್ಕೆ ಕಾರಣವಾಗಿದೆ" ಎಂದು ನ್ಯೂಜಿಲೆಂಡ್‌ನ ಮುಖ್ಯ ತರಬೇತುದಾರ ಗ್ಯಾರಿ ಸ್ಟೆಡ್ ಹೇಳಿದರು.

"2022ರ ಜೂನ್‌ನಲ್ಲಿ ಅವರು ಗಾಯಗೊಂಡ ಬಳಿಕ ಅವರ ಆರೋಗ್ಯದ ಬಗ್ಗೆ ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಸಂಪೂರ್ಣವಾಗಿ ಫಿಟ್ ಆದ ನಂತರವೇ ಅವರು ಮತ್ತೆ ಕ್ರಿಕೆಟ್‌ಗೆ ಮರಳುವ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸುತ್ತೇವೆ" ಎಂದು ಅವರು ಹೇಳಿದರು.

ಬದಲೀ ಆಟಗಾರನ ಘೋಷಿಸಲು ಸಿಎಸ್‌ಕೆ ಚಿಂತನೆ

ಶುಕ್ರವಾರ ಕೈಲ್ ಜೇಮಿಸನ್ ಸಿಟಿ ಸ್ಕ್ಯಾನ್‌ಗೆ ಒಳಗಾಗಲಿದ್ದು ನಂತರ ಅವರ ಗಾಯದ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.

ಕೈಲ್ ಜೇಮಿಸನ್ ಬೆನ್ನು ಮೂಳೆ ಒತ್ತಡಕ್ಕೆ ಒಳಗಾಗಿರುವುದು ಸಿಎಸ್‌ಕೆ ತಂಡಕ್ಕೆ ಹಿನ್ನಡೆಯಾಗಿದೆ. ಶೀಘ್ರದಲ್ಲೇ ಜೇಮಿಸನ್ ಬದಲಿಯಾಗಿ ಬೇರೆ ಆಟಗಾರನನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಮಹೇಶ್ ತೀಕ್ಷಣ, ನಿಶಾಂತ್ ಸಿಂಧು, ತುಷಾರ್ ದೇಶಪಾಂಡೆ, ಮತ್ತು ಮಥೀಶ ಪತಿರಾನ ತಂಡದಲ್ಲಿರುವ ಇತರೆ ಬೌಲರ್ ಆಗಿದ್ದು, ಆಲ್‌ರೌಂಡರ್ ಒಬ್ಬರನ್ನು ಬದಲಿಯಾಗಿ ಸೇರಿಸಿಕೊಳ್ಳುವ ಸಾಧ್ಯತೆ ಇದೆ.