ಮೇಘಾಲಯ, ನಾಗಾಲ್ಯಾಂಡ್ ಚುನಾವಣೆ: ಬಿಜೆಪಿಗೆ ಅಗ್ನಿಪರೀಕ್ಷೆ

ಮೇಘಾಲಯ, ನಾಗಾಲ್ಯಾಂಡ್ ಚುನಾವಣೆ: ಬಿಜೆಪಿಗೆ ಅಗ್ನಿಪರೀಕ್ಷೆ

ಗುವಾಹತಿ: ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲಿ ಐದು ವರ್ಷಗಳ ಹಿಂದೆ ಪ್ರಾದೇಶಿಕ ಪಕ್ಷಗಳ ಜತೆ ಸೇರಿ ಚೊಚ್ಚಲ ಸರ್ಕಾರ ರಚಿಸಿದ್ದ ಬಿಜೆಪಿಗೆ ಈ ಬಾರಿ ಅಗ್ನಿಪರೀಕ್ಷೆ ಎದುರಾಗಿದೆ. ಸೋಮವಾರ ಉಭಯ ರಾಜ್ಯಗಳಲ್ಲಿ ಮತದಾನ ಆರಂಭವಾಗಿದ್ದು, 2024ರ ಸಾರ್ವತ್ರಿಕ ಚುನಾವಣೆ ಮುನ್ನ ನಡೆಯುತ್ತಿರುವ ಈ ಚುನಾವಣೆ ಬಿಜೆಪಿಗೆ ಮಹತ್ವದ್ದಾಗಿದೆ.

ಉಭಯ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭರ್ಜರಿ ರೋಡ್‌ಶೋ ನಡೆಸಿದ್ದು, ಈಶಾನ್ಯ ರಾಜ್ಯಗಳಲ್ಲಿ ಶಾಂತಿ, ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಯ ಭರವಸೆ ನೀಡಿದ್ದಾರೆ.

ಕ್ರೈಸ್ತ ಮತದಾರರ ಪ್ರಾಬಲ್ಯ ಇರುವ ಉಭಯ ಬುಡಕಟ್ಟು ರಾಜ್ಯಗಳಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ. ಅಸ್ಸಾಂ, ಮಣಿಪುರ ಹಾಗೂ ತ್ರಿಪುರದಂತೆ ಈ ಎರಡು ರಾಜ್ಯಗಳು ಕೂಡಾ ಪಕ್ಷದ ಕೈಯಲ್ಲೇ ಉಳಿಯಲಿದೆ ಎಂಬ ನಿರೀಕ್ಷೆ ಬಿಜೆಪಿ ಮುಖಂಡರದ್ದು. ಎಲ್ಲ ಎಂಟು ಈಶಾನ್ಯ ರಾಜ್ಯಗಳ ಸರ್ಕಾರದಲ್ಲಿ ಬಿಜೆಪಿ ಪಾಲುದಾರಿಕೆ ಹೊಂದಿದೆ ಎನ್ನುವುದು ಗಮನಾರ್ಹ.

ನಾಗಾಲ್ಯಾಂಡ್ ಸಿಎಂ ನಿಂಫು ರಿಯೊ ಅವರ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಕಳೆದ ಬಾರಿ 12 ಸ್ಥಾನ ಗೆದ್ದಿದ್ದ ಬಿಜೆಪಿಯೂ ಇದೆ. 60 ಸದಸ್ಯಬಲದ ಸದನದಲ್ಲಿ ಬಿಜೆಪಿ-ಎನ್‌ಡಿಪಿಪಿಗೆ ಧನಾತ್ಮಕ ವಾತಾವರಣ ಕಾಣುತ್ತಿದ್ದು, ಬಿಜೆಪಿ ಅಭ್ಯರ್ಥಿ ಅಕುಲುಟೊ ಈಗಾಗಲೇ ಅವಿರೋಧ ಆಯ್ಕೆಯಾಗಿದ್ದಾರೆ.

ಮೇಘಾಲಯದಲ್ಲಿ ಸಿಎಂ ಕೊರ್ನಾಡ್ ಸಂಗ್ಮಾ ನೇತೃತ್ವದ ಸರ್ಕಾರದಿಂದ ಬಿಜೆಪಿ ಒಂದು ವರ್ಷ ಮೊದಲು ಕಳಚಿಕೊಂಡಿದೆ. 60 ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್ 21, ಬಿಜೆಪಿ ಹಾಗೂ ಎನ್ಪಿ ತಲಾ 2 ಸ್ಥಾನಗಳನ್ನು ಗೆದ್ದಿದ್ದವು. ಉಳಿದ ಸ್ಥಾನಗಳು ಪ್ರಾದೇಶಿಕ ಪಕ್ಷಗಳು ಹಾಗೂ ಪಕ್ಷೇತರರ ಪಾಲಾಗಿದ್ದವು. ಆದರೆ 20 ಶಾಸಕರು ತಮ್ಮ ಪಕ್ಷಗಳನ್ನು ಬದಲಿಸಿದ್ದರು.

ಎರಡು ರಾಜ್ಯಗಳಲ್ಲಿ 34 ಲಕ್ಷ ಮತದಾರರಿದ್ದು, ಮೇಘಾಲಯದಲ್ಲಿ ಕಾಂಗ್ರೆಸ್ ಹಾಗೂ ಹೊಸದಾಗಿ ಕಣದಲ್ಲಿರುವ ಟಿಎಂಸಿಗೆ ಕೂಡಾ ನೈಜ ಪರೀಕ್ಷೆ ಎದುರಾಗಿದೆ.