ಮಾಂಡೌಸ್ ಚಂಡಮಾರುತ – ನೆರೆಯ ತಮಿಳುನಾಡು, ಆಂಧ್ರಕ್ಕೆ ಭಾರೀ ಮಳೆ ಎಚ್ಚರಿಕೆ

ಮಾಂಡೌಸ್ ಚಂಡಮಾರುತ – ನೆರೆಯ ತಮಿಳುನಾಡು, ಆಂಧ್ರಕ್ಕೆ ಭಾರೀ ಮಳೆ ಎಚ್ಚರಿಕೆ

ನವದೆಹಲಿ: ನೈಋತ್ಯ ಹಾಗೂ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮಾಂಡೌಸ್ ಚಂಡಮಾರುತ ತೀವ್ರಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಉತ್ತರ ತಮಿಳುನಾಡು, ಪುದುಚೇರಿ ಹಾಗೂ ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಭಾರಿ ಮಳೆಯ ಎಚ್ಚರಿಕೆಯನ್ನು ನೀಡಿದೆ.
ಹವಾಮಾನ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ಮಾಂಡೌಸ್ ಚಂಡಮಾರುತ ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸಲಿದ್ದು, ಡಿಸೆಂಬರ್ 7 ರಂದು ಇದರ ತೀವ್ರತೆ ಹೆಚ್ಚಾಗಲಿದೆ. ಡಿಸೆಂಬರ್ 8 ರಂದು ಉತ್ತರ ತಮಿಳುನಾಡು, ಪುದುಚೇರಿ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗಕ್ಕೆ ತಲುಪಲಿದ್ದು, ನೈಋತ್ಯ ಬಂಗಾಳಕೊಲ್ಲಿ ತಲುಪುವ ಸಾಧ್ಯತೆ ಇದೆ ಎಂದು ತಿಳಿಸಿದೆ.  
ಮಾಂಡೌಸ್ ಚಂಡಮಾರುತದ ಪ್ರಭಾವದಿಂದಾಗಿ ಮುಂದಿನ 2 ದಿನಗಳ ಕಾಲ ಹಲವಾರು ರಾಜ್ಯಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಲಿದೆ. ತಮಿಳುನಾಡಿನ ಕರಾವಳಿ ಭಾಗ, ಪುದುಚೇರಿ ಮತ್ತು ಕಾರೈಕಲ್ನಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ. ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಭಾಗ ಮತ್ತು ರಾಯಲಸೀಮಾದ ಅಕ್ಕ ಪಕ್ಕದ ಪ್ರದೇಶಗಳಲ್ಲಿ ಗುರುವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮಾಹಿತಿ ನೀಡಿದೆ.