ಅತ್ತ ಅರೆಸ್ಟ್ ವಾರೆಂಟ್, ಇತ್ತ ಉಕ್ರೇನ್ ನೆಲಕ್ಕೆ ನುಗ್ಗಿ ತೊಡೆತಟ್ಟಿದ ಪುಟಿನ್!

ಅತ್ತ ಅರೆಸ್ಟ್ ವಾರೆಂಟ್, ಇತ್ತ ಉಕ್ರೇನ್ ನೆಲಕ್ಕೆ ನುಗ್ಗಿ ತೊಡೆತಟ್ಟಿದ ಪುಟಿನ್!

ಮಾಸ್ಕೋ, ಮಾರ್ಚ್ 20: ಒಂದೆಡೆ 3ನೇ ಮಹಾಯುದ್ಧದ ಮಾತುಗಳು ಮೊಳಕೆಯೊಡೆದು ಜಗತ್ತಿನ ಮೂಲೆ ಮೂಲೆಯಲ್ಲೂ ಆತಂಕ ಆವರಿಸಿದೆ. ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ಎಲ್ಲಿ 3ನೇ ಮಹಾಯುದ್ಧವಾಗಿ ಬದಲಾಗುತ್ತದೋ ಎಂಬ ಭಯ ಆಧುನಿಕ ಜಗತ್ತನ್ನು ಕಾಡುತ್ತಿದೆ. ಆದರೆ ಈ ಹೊತ್ತಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ವಿರುದ್ಧ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿರುವುದು, 3ನೇ ಮಹಾಯುದ್ಧದ ಜ್ವಾಲೆಗೆ ತುಪ್ಪ ಸುರಿದಿದೆ.

ಮೊದಲೇ ಕೊತ ಕೊತ ಕುದಿಯುತ್ತಿದ್ದ ರಷ್ಯಾ ಅಧ್ಯಕ್ಷರನ್ನ ಈ ಘಟನೆ ಮತ್ತಷ್ಟು ಕೆರಳುವಂತೆ ಮಾಡಿದೆ. ಇದೇ ಸಂದರ್ಭದಲ್ಲಿ ಅಮೆರಿಕ, ನ್ಯಾಟೋ ಪಡೆಗಳು ಸೇರಿದಂತೆ ರಷ್ಯಾದ ಶತ್ರುಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಲು ಉಕ್ರೇನ್ ವ್ಯಾಪ್ತಿಯ ರಷ್ಯಾ ಆಕ್ರಮಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ ಪುಟಿನ್. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ 1 ವರ್ಷ ಪೂರ್ಣಗೊಂಡ ಬೆನ್ನಲ್ಲೇ ವ್ಲಾಡಿಮಿರ್‌ ಪುಟಿನ್ ಶತ್ರು ರಾಷ್ಟ್ರದ ನೆಲಕ್ಕೆ ಭರ್ಜರಿಯಾಗಿ ಭೇಟಿ ನೀಡಿರುವುದು ಯುರೋಪ್ ರಾಷ್ಟ್ರಗಳ ನಿದ್ದೆಗೆಡಿಸಿದೆ.

ರಷ್ಯಾ ಮಾಧ್ಯಮಗಳು ನೀಡಿರುವ ಮಾಹಿತಿ ಪ್ರಕಾರ, ಉಕ್ರೇನ್‌ ಯುದ್ಧದಲ್ಲಿ ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿರುವ ಬಂದರು ನಗರಿ ಮರಿಯುಪೋಲ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭೇಟಿ ನೀಡಿದ್ದಾರೆ. ಮಾರ್ಚ್ 18ರ ಶನಿವಾರ ಪುಟಿನ್ ಮರಿಯುಪೋಲ್‌ ಬಂದರು ನಗರದಿಂದ ಕೂಗಳತೆ ದೂರದಲ್ಲಿರುವ ಕ್ರಿಮಿಯಾಗೆ ಕೂಡ ಭೇಟಿ ನೀಡಿದ್ದರು.

ಈಗ ನೇರವಾಗಿ ಉಕ್ರೇನ್ ಆಡಳಿತದಲ್ಲಿದ್ದ ಮರಿಯುಪೋಲ್‌ ನಗರಕ್ಕೆ ಭೇಟಿ ನೀಡುವುದು ಮಾತ್ರವಲ್ಲ, ಅಲ್ಲಿ ಸುತ್ತಾಡಿ ಶತ್ರು ರಾಷ್ಟ್ರಗಳ ಸೇನೆಗೆ ಸವಾಲು ಹಾಕಿದ್ದಾರೆ. ಹೆಲಿಕಾಪ್ಟರ್‌ ಮೂಲಕ ಮರಿಯುಪೋಲ್ಗೆ ಬಂದು, ಸ್ಥಳೀಯರೊಂದಿಗೆ ಚರ್ಚೆ ನಡೆಸಿದ್ದಾರೆ. ಜೊತೆಗೆ ಸ್ಥಳೀಯ ಶಾಲೆಯೊಂದಕ್ಕೂ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಕಷ್ಟ-ಸುಖ ಹಂಚಿಕೊಂಡಿದ್ದಾರೆ.

ICC ವಿರುದ್ಧ ರಷ್ಯಾ ಗರಂ

ಈಗಾಗಲೇ ಪುಟಿನ್‌ ಸರ್ಕಾರ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ ಆದೇಶಕ್ಕೆ ಪ್ರತಿಕ್ರಿಯೆ ನೀಡಿದ್ದು, ICC ವ್ಯಾಪ್ತಿಗೆ ಮಾಸ್ಕೋ ಬರುವುದಿಲ್ಲ. ಈ ಹಿನ್ನೆಲೆ ಅರೆಸ್ಟ್ ವಾರೆಂಟ್ ಅನೂರ್ಜಿತ ಎಂಬ ಉತ್ತರ ನೀಡಿದೆ. ರಷ್ಯಾ ಸರ್ಕಾರ ಹೇಳಿರುವ ಈ ಮಾತುಗಳು ಮತ್ತೊಮ್ಮೆ ಜಗತ್ತನ್ನು ಮಹಾಯುದ್ಧದ ಕತ್ತಲಿಗೆ ತಳ್ಳಬಹುದಾ? ಎಂಬ ಪ್ರಶ್ನೆ ಕೂಡ ಜೀವತಾಳಿದೆ.

ಏಕೆಂದರೆ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ವಿಶ್ವಸಂಸ್ಥೆ ICCಯಲ್ಲಿ ಮಾಡಿರುವ ಆರೋಪಗಳು, ರಷ್ಯಾವನ್ನ ವಿಶ್ವಸಂಸ್ಥೆಯಿಂದ ಹೊರ ನಡೆಯುವಂತೆ ಪ್ರಚೋದಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ವಾಸ್ತವವಾಗಿ ಈ ನಿರ್ಧಾರ ಸಾಧ್ಯವಾಗದೇ ಇದ್ದರೂ, ಯುದ್ಧದ ಪರಿಸ್ಥಿತಿಯಲ್ಲಿ ರಷ್ಯಾ ಇಂತಹ ನಿರ್ಧಾರವನ್ನು ಭವಿಷ್ಯದಲ್ಲಿ ತೆಗೆದುಕೊಂಡರೂ ಅಚ್ಚರಿಯಿಲ್ಲ. ಅಮೆರಿಕದ ಜೊತೆ ಸೇರಿ ಇದೇ ರಷ್ಯಾ ಅಂದರೆ ಆಗಿನ ಸೋವಿಯ್ ರಷ್ಯಾ 2ನೇ ಮಹಾಯುದ್ಧದ ನಂತರ 1945ರಲ್ಲಿ ವಿಶ್ವಸಂಸ್ಥೆ ಸ್ಥಾಪಿಸಿತ್ತು.

ಬದಲಾಗುತ್ತಿದೆ ರಷ್ಯಾ ಪರಿಸ್ಥಿತಿ

ಆದರೆ ಈಗಿನ ಪರಿಸ್ಥಿತಿ ವ್ಯತಿರಿಕ್ತವಾಗುತ್ತಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಈಗಾಗಲೇ ವಿಶ್ವಸಂಸ್ಥೆಯ ನಡೆ ವಿರುದ್ಧ ರಷ್ಯಾ ಹಲವಾರು ಬಾರಿ ಗರಂ ಆಗಿದೆ. ತನ್ನ ಆಕ್ರೋಶ ಹೊರಹಾಕಿದೆ. ಜೊತೆಗೆ ತನ್ನ ಪರಮಾಪ್ತ ರಾಷ್ಟ್ರ ಚೀನಾ ಜೊತೆ ಸೇರಿ ಅಮೆರಿಕ ಹಾಗೂ ಅದರ ಮಿತ್ರಪಡೆಗಳ ವಿರುದ್ಧ ರಣತಂತ್ರ ರೂಪಿಸುತ್ತಿದೆ.

ಈ ಎಲ್ಲಾ ಬೆಳವಣಿಗೆಗಳನ್ನ ನೋಡುತ್ತಿದ್ದರೆ ರಷ್ಯಾ ಅಧ್ಯಕ್ಷ ಪುಟಿನ್ ಏನೋ ಮಾಸ್ಟರ್ ಪ್ಲ್ಯಾನ್ ಮಾಡಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಅದರಲ್ಲೂ ವಿಶ್ವಸಂಸ್ಥೆಗೆ ರಷ್ಯಾ ಗುಡ್ ಬೈ ಹೇಳುತ್ತಾ ಅನ್ನೋ ಕುತೂಹಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡುತ್ತಿದೆ.

3ನೇ ಮಹಾಯುದ್ಧ ನಡೆಯುತ್ತಾ?

ಇದು ಜಗತ್ತನ್ನು ಕಾಡುತ್ತಿರುವ ಟ್ರಿಲಿಯನ್ ಡಾಲರ್ ಪ್ರಶ್ನೆ. ಹಲವು ದಶಕಗಳಿಂದ ಪದೇ ಪದೆ ಈ ಪ್ರಶ್ನೆ ಜನರನ್ನು ಕಾಡುತ್ತಲೇ ಇರುತ್ತದೆ. ಆದರೆ ಉತ್ತರ ಮಾತ್ರ ಸ್ಪಷ್ಟವಾಗುತ್ತಿಲ್ಲ. ಈ ಹಿಂದೆ ಕೂಡ ಹಲವು ಸಂದರ್ಭಗಳಲ್ಲಿ ರಷ್ಯಾ ಮತ್ತು ಅಮೆರಿಕ ನಡುವೆ ಪರೋಕ್ಷವಾಗಿ ಯದ್ಧದ ಭೀತಿ ನಿರ್ಮಾಣವಾಗಿ, 3ನೇ ಮಹಾಯುದ್ಧ ಆರಂಭವಾಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಅದರಲ್ಲೂ ರಷ್ಯಾ ಮತ್ತು ಅಮೆರಿಕ ನಡುವಿನ ಶೀತಲ ಸಮರ ಅಂದರೆ ಕೋಲ್ಡ್ ವಾರ್ (Cold War) ಅನ್ನೇ 3ನೇ ಮಹಾಯುದ್ಧ ಎನ್ನುತ್ತಾರೆ ಸಾಕಷ್ಟು ಮಂದಿ. ಆದರೆ 3ನೇ ಮಹಾಯುದ್ಧ ಇನ್ನೂ ಆರಂಭವೇ ಆಗಿಲ್ಲ. ಅಕಸ್ಮಾತ್ 3ನೇ ಮಹಾಯುದ್ಧ ಆರಂಭವಾಗಿದ್ದೇ ನಿಜವಾದರೆ ಈ ಬಾರಿ ಭೂಮಿ ಮೇಲೆ ಮಾನವನೆಂಬ ಜೀವಿ ಇದ್ದ ಎಂಬ ಕುರುಹುಗಳೇ ಸಿಗದಂತಹ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿ ಇಲ್ಲ.

ಈಗ ಮಾನವನ ಬಳಿ ಇರುವ ನ್ಯೂಕ್ಲಿಯರ್ ಅಸ್ತ್ರಗಳು ಆ ರೀತಿ ಭಯಾನಕ ಪರಿಸ್ಥಿತಿ ನಿರ್ಮಿಸಿಬಿಡುತ್ತವೆ. ಉಕ್ರೇನ್ & ರಷ್ಯಾ ನಡುವಿನ ಯುದ್ಧ ಇಂತಹ ಆತಂಕವನ್ನು ಸೃಷ್ಟಿಸಿದ್ದರೂ 3ನೇ ಮಹಾಯುದ್ಧ ಸುಲಭಕ್ಕೆ ಶುರುವಾಗುವ ಸಾಧ್ಯತೆ ಇಲ್ಲ.

ಪುಟಿನ್ ಅಳೆದು ತೂಗಿ ಉಕ್ರೇನ್ ನೆಲಕ್ಕೆ ಎಂಟ್ರಿ

ಒಟ್ಟಾರೆ ಹೇಳುವುದಾದರೆ ರಷ್ಯಾ ಅಧ್ಯಕ್ಷ ಪುಟಿನ್ ಅಳೆದು ತೂಗಿ ಉಕ್ರೇನ್ ನೆಲಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸರಿಯಾಗಿ 1 ವರ್ಷದ ಹಿಂದೆ ತಮ್ಮ ಸೇನೆಯನ್ನು ಶತ್ರು ನೆಲಕ್ಕೆ ನುಗ್ಗಿಸಿದ್ದ ಇದೇ ಪುಟಿನ್, ಇದೀಗ ತಾವೇ ಧೈರ್ಯವಾಗಿ ಉಕ್ರೇನ್ ಯುದ್ಧಭೂಮಿಗೆ ಭೇಟಿ ನೀಡಿದ್ದಾರೆ. ಈ ಮೂಲಕ ನ್ಯಾಟೋ ಪಡೆಗಳಿಗೂ ಬಿಸಿ ಮುಟ್ಟಿಸಿದ್ದು, ಅಮೆರಿಕ ಹಾಗೂ ಅದರ ಮಿತ್ರರಿಗೂ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಆದರೆ ಉಕ್ರೇನ್ ಅಧ್ಯಕ್ಷರಾಗಲಿ ಅಥವಾ ಉಕ್ರೇನ್ನ ಮಾಧ್ಯಮಗಳಾಗಲಿ ಪುಟಿನ್ ತಮ್ಮ ದೇಶಕ್ಕೆ ಭೇಟಿ ನೀಡಿರುವ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕಿಲ್ಲ.