ಬೆಂಗಳೂರಿನ ಪಣತ್ತೂರು ಬಳಿ ಟ್ರಾಫಿಕ್‌ನಲ್ಲಿ ಸಿಲುಕಿದ ಶಾಲಾ ಮಕ್ಕಳಿಂದ ಪ್ರತಿಭಟನೆ

ಬೆಂಗಳೂರಿನ ಪಣತ್ತೂರು ಬಳಿ ಟ್ರಾಫಿಕ್‌ನಲ್ಲಿ ಸಿಲುಕಿದ ಶಾಲಾ ಮಕ್ಕಳಿಂದ ಪ್ರತಿಭಟನೆ

ಬೆಂಗಳೂರು, ನವೆಂಬರ್ 10: ಶಾಲೆಗೆ ತೆರಳಿಬೇಕಿದ್ದ ಮಕ್ಕಳು, ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದ ನಾಗರಿಕರು ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಘಟನೆ ಮಹದೇವಪುರ ವಲಯ ವ್ಯಾಪ್ತಿಯ ಪಣತ್ತೂರು ಎಸ್‌ ಕ್ರಾಸ್‌ನಲ್ಲಿ ಬುಧವಾರ ನಡೆದಿದೆ.

ಹಾಳಾದ ಹಾಗೂ ಸುವ್ಯವಸ್ಥಿತವಲ್ಲದ ರಸ್ತೆಯಲ್ಲಿ ಪ್ರತಿನಿತ್ಯವು ಸೃಷ್ಟಿಯಾಗುವ ಸಂಚಾರ ದಟ್ಟಣೆಯಲ್ಲಿ ಸುಮಾರು 2 ಗಂಟೆ 30ನಿಮಿಷ ಶಾಲಾ ಮಕ್ಕಳು ಸಿಲುಕಿದ್ದರು.

ಇದರಿಂದ ಕೆಲವು ಮಕ್ಕಳು ಮನೆಗೆ ಮರಳಿದ್ದು, ಶಾಲೆಗೆ ಗೈರಾಗಿದ್ದಾರೆ. ಹಲವರು ಮಕ್ಕಳಿಗೆ ಶಾಲಾ ಕಲಿಕೆ ಸಮಯವು ವ್ಯತ್ಯಯವಾಗಿದೆ. ಈ ಸಂಬಂಧ ಚಿಕ್ಕ ಮಕ್ಕಳು ಹಾಗೂ ಪೋಷಕರು ಕ್ಯಾಂಡಲ್‌ ಹಿಡಿದು ಪ್ರತಿಭಟನೆ ಮಾಡಿದರು.

ಪ್ರತಿಭಟನೆಯಲ್ಲಿ ಮಕ್ಕಳು ಶಾಲೆಗೆ ತೆರಳಲು ಸುಗಮ ಸಂಚಾರದ ವ್ಯವಸ್ಥಿತ ರಸ್ತೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಮಹದೇವಪುರ ವಲಯ ವ್ಯಾಪ್ತಿಯಲ್ಲಿನ ಈ ಪಣತ್ತೂರು ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 4ವರ್ಷಗಳಾದರೂ ಈವರೆಗೂ ಪೂರ್ಣಗೊಂಡಿಲ್ಲ. ಬಡಾವಣೆಗಳಿಂದ ಮುಖ್ಯರಸ್ತೆ ಸಂಪರ್ಕಿಸುವ ಉಪ ರಸ್ತೆಗಳಲ್ಲಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

4 ವರ್ಷ ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ

ನಾಲ್ಕು ವರ್ಷಗಳಾದರು ಈ ಭಾಗದಲ್ಲಿ ರಸ್ತೆ ಯೋಜನೆಗಳು ಪೂರ್ಣಗೊಳ್ಳದೇ ಹಾಗೇ ಇವೆ. ಈ ಬಗ್ಗೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲ. ಕೇಳಿದರೆ ಮಳೆಗಾಲ, ಅತೀವ ಮಳೆಯಿಂದಾಗಿ ಕೆಲಸ ನಿಂತುಕೊಂಡಿದೆ ಎಂದು ಅಧಿಕಾರಿಗಳು ಸಬೂಬು ಹೇಳಿದ್ದಾರೆ ಎಂದು ಸ್ಥಳೀಯರು ದೂರಿದ್ದರು, ಆ ಬಗ್ಗೆ ಈಗಾಗಲೇ ವರದಿಯಾಗಿದೆ.ನಿತ್ಯ ಬೆಳಗ್ಗೆ ವಿವಿಧ ಕೆಲಸಗಳಿಗೆ ತೆರಳುವ ನಾಗರಿಕರು, ಉದ್ಯೋಗಿಗಳು, ಶಾಲಾ ಮಕ್ಕಳು ಪಣತ್ತೂರು ಎಸ್‌ ಕ್ರಾಸ್‌ ಸೇರಿದಂತೆ ಮಹದೇವಪುರ ವ್ಯಾಪ್ತಿಯ ಹಲವೆಡೆ ಇದೇ ಸಮಸ್ಯೆ ಸೃಷ್ಟಿಯಾಗಿದೆ. ಅಲ್ಲಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾರು, ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸಿರುತ್ತಾರೆ. ಇದರಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ವ್ಯವಸ್ಥೆ ರಸ್ತೆ ಕಲ್ಪಿಸುವುದೊಂದೆ ಪರಿಹಾರವಾಗಿದೆ. ಈ ಬಗ್ಗೆ ಸರ್ಕಾರಿ, ಬಿಬಿಎಂಪಿ ಅಧಿಕಾರಿಗಳು ಗಮನ ಹರಿಸಬೇಕಿದೆ.