70 ಮಕ್ಕಳ ಸಾವಿಗೆ ಭಾರತದ ಕೆಮ್ಮಿನ ಔಷಧಿ ಕಾರಣವಲ್ಲ ಎಂದ ಗ್ಯಾಂಬಿಯಾ

70 ಮಕ್ಕಳ ಸಾವಿಗೆ ಭಾರತದ ಕೆಮ್ಮಿನ ಔಷಧಿ ಕಾರಣವಲ್ಲ ಎಂದ ಗ್ಯಾಂಬಿಯಾ

ವದೆಹಲಿ, ನವೆಂಬರ್ 3: ತೀವ್ರವಾದ ಮೂತ್ರಪಿಂಡದ ತೊಂದರೆಯಿಂದ 70 ಮಕ್ಕಳು ಮೃತಪಡಲು ವಿಷಕಾರಿ ಕೆಮ್ಮಿನ ಸಿರಪ್ ಕಾರಣ ಎಂಬುದರ ಬಗ್ಗೆ ಗ್ಯಾಂಬಿಯಾ ಸರ್ಕಾರ ಇನ್ನೂ ದೃಢಪಡಿಸಿಲ್ಲ. ಈ ಅಂಶವನ್ನು ದೇಶದ ಔಷಧಿ ನಿಯಂತ್ರಣ ಏಜೆನ್ಸಿಯ ಪ್ರತಿನಿಧಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಇದರ ಮಧ್ಯೆ ಸಾವನ್ನಪ್ಪಿದ ಮಕ್ಕಳ ಶವಪರೀಕ್ಷೆ ವರದಿಯಲ್ಲಿ, ಮಕ್ಕಳು ಎಸ್ಚೆರಿಚಿಯಾ ಕೋಲಿ (ಇ ಕೋಲಿ) ಮತ್ತು ಅತಿಸಾರದಿಂದ ಬಳಲುತ್ತಿದ್ದಾರೆ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ. ಹಾಗಿದ್ದು ಆ ಮಕ್ಕಳಿಗೆ ಕೆಮ್ಮಿನ ಸಿರಪ್ ಏಕೆ ನೀಡಲಾಯಿತು,'' ಎಂದು ಸರ್ಕಾರಿ ಅಧಿಕಾರಿಯೊಬ್ಬರು ಪ್ರಶ್ನೆ ಮಾಡಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಗ್ಯಾಂಬಿಯಾದಲ್ಲಿ ತೀವ್ರವಾದ ಮೂತ್ರಪಿಂಡದ ಗಾಯ ಮತ್ತು 70 ಮಕ್ಕಳ ಸಾವಿಗೆ ಸಂಬಂಧಿಸಿರುವುದಾಗಿ ಗುರುತಿಸಲಾಗಿತ್ತು. ಈ ಸಂಬಂಧ ಗುರುತಿಸಲಾದ ನಾಲ್ಕು ಕಲುಷಿತ ಔಷಧಿಗಳಿಗೆ ವೈದ್ಯಕೀಯ ಉತ್ಪನ್ನದ ಎಚ್ಚರಿಕೆಯನ್ನು ನೀಡಲಾಗಿತ್ತು. ಜುಲೈ ಅಂತ್ಯದ ವೇಳೆಗೆ ಐದು ವರ್ಷದೊಳಗಿನ ಮಕ್ಕಳಲ್ಲಿ ತೀವ್ರವಾದ ಮೂತ್ರಪಿಂಡದ ಗಾಯದ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿತ್ತು. ಇಂಥ ಪ್ರಕರಣಗಳು ಹೆಚ್ಚಾಗುವುದಕ್ಕೆ ಈ ಕೆಮ್ಮಿನ ಔಷಧಿಗಳೇ ಕಾರಣವಾಗಿರಬಹುದು ಎಂದು ವೈದ್ಯರು ಶಂಕಿಸಿದ್ದರು.

ವಿಶ್ವಸಂಸ್ಥೆ ಹೇಳಿದ್ದೇನು?:

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ನಾಲ್ಕು ಕೆಮ್ಮು ಮತ್ತು ಶೀತದ ಸಿರಪ್‌ಗಳು ಭಾರತದಲ್ಲಿ ಮೇಡೆನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟಿದೆ. ಹೀಗಾಗಿ ಎಚ್ಚರಿಕೆಯ ನಂತರ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ತನಿಖೆಯನ್ನು ಪ್ರಾರಂಭಿಸಿತು. ಗ್ಯಾಂಬಿಯಾದ ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಹರ್ಯಾಣ ರಾಜ್ಯದ ಔಷಧ ಅಧಿಕಾರಿಗಳು ನಂತರ ಮೇಡನ್ ಫಾರ್ಮಾದ ಉತ್ಪಾದನಾ ಸೌಲಭ್ಯದ ತಪಾಸಣೆಯ ಸಮಯದಲ್ಲಿ ಸ್ಪಷ್ಟವಾದ ಲೋಪಗಳನ್ನು ಕಂಡುಕೊಂಡರು.

ಗ್ಯಾಂಬಿಯಾದ ಸರ್ಕಾರ ಹೇಳಿದ್ದೇನು?:

ಗ್ಯಾಂಬಿಯಾದ ಔಷಧಿಗಳ ನಿಯಂತ್ರಣ ಏಜೆನ್ಸಿಯ ಅಧಿಕಾರಿ, ದೇಶದ ಡ್ರಗ್ಸ್ ನಿಯಂತ್ರಕ ಟಿಜಾನ್ ಜಾಲೋ, ಮಕ್ಕಳ ಸಾವಿನ ನಿಖರವಾದ ಕಾರಣವನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಹೇಳಿದರು. ಮಕ್ಕಳ ಸಾವಿಗೆ ಈ ಔಷಧಿಯೇ ಕಾರಣವಾಗಿತು ಎಂಬು ನಾವು ಇನ್ನೂ ತೀರ್ಮಾನಿಸಿಲ್ಲ, ಯಾವುದೇ ಔಷಧಿಯನ್ನು ತೆಗೆದುಕೊಳ್ಳದ ಮಕ್ಕಳು ಸಹ ಸಾವನ್ನಪ್ಪಿರುವ ಪ್ರಕರಣಗಳಿವೆ. ಬೇರೆ ಮಕ್ಕಳು ಸಹ ಮೃತಪಟ್ಟಿದ್ದಾರೆ. ಅವರು ತೆಗೆದುಕೊಂಡಿರುವ ಔಷಧಿಗಳನ್ನು ನಾವು ಪರೀಕ್ಷಿಸಿದ್ದೇವೆ, ಅವು ಉತ್ತಮವಾಗಿವೆ, ಎಂದು ಅವರು ಹೇಳಿದರು.