ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರುಣಾರ್ಭಟ, ಇನ್ನೂ 3 ದಿನ ಮಳೆ..!

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರುಣಾರ್ಭಟ, ಇನ್ನೂ 3 ದಿನ ಮಳೆ..!

ಬೆಂಗಳೂರು,ಅ.2- ರಾಜ್ಯದ ವಿವಿಧೆಡೆ ರಾತ್ರಿ ಭಾರೀ ಮಳೆ ಸುರಿದಿದ್ದು ಅಲ್ಲಲ್ಲಿ ಬೆಳೆನಷ್ಟ, ಪ್ರಾಣಹಾನಿ ಸಂಭವಿಸಿವೆ. ರಾಯಚೂರು ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗಿದ್ದು, ಸಿರವಾರ ತಾಲೂಕಿನ ಚೌಧರಿ ಕ್ಯಾಂಪ್‍ನಲ್ಲಿ ನಿನ್ನೆ ರಾತ್ರಿ ಸಿಡಿಲಿಗೆ ಪೃಥ್ವಿ (24) ಎಂಬಾತ ಬಲಿಯಾಗಿದ್ದಾನೆ. ಹಾಲು ಮಾರಾಟ ಮಾಡಿ ಬೈಕ್‍ನಲ್ಲಿ ಮನೆಗೆ ವಾಪಸ್ಸಾಗುವ ವೇಳೆ ಘಟನೆ ಸಂಭವಿಸಿದೆ. ಈ ಸಂಬಂಧ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಸಹ ನಿನ್ನೆ ರಾತ್ರಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಜಿಲ್ಲೆಯ ಹಲವೆಡೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕಬ್ಬು, ಬಾಳೆ ಸೇರಿದಂತೆ ವಿವಿಧ ಬೆಳೆಗಳು ನೆಲಕಚ್ಚಿವೆ.ಪ್ರವಾಹದ ಬಳಿಕ ಇದೀಗ ಮತ್ತೆ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಭಾರೀ ಮಳೆಯಿಂದಾಗಿ ಗಂಡೋರಿ ನಾಲೆಯ ಕೋಡಿ ಒಡೆದು ನೂರಾರು ಎಕರೆ ಈರುಳ್ಳಿ ನೀರುಪಾಲಾಗಿದೆ. ಕಲಬುರಗಿಯ ಅರಣಕಲ್ ಸುತ್ತಮುತ್ತಲ ಹೊಲಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ.

ದಾವಣಗೆರೆಯಲ್ಲಿ ರಾತ್ರಿ ಭಾರೀ ಮಳೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿದ್ದರಿಂದ ಬೂದಾಳು ರಸ್ತೆಯ ಬಾಬು ಜಗಜೀವನರಾಮ್‍ನಗರದಲ್ಲಿ ಕೂಲಿ ಕಾರ್ಮಿಕರು ರಾತ್ರಿಯಿಡೀ ನಿದ್ದೆ ಇಲ್ಲದೆ ಜಾಗರಣೆ ಮಾಡಿದ್ದಾರೆ. ಕೂಲಿಕಾರ್ಮಿಕರು ಕಂಗಾಲಾಗಿದ್ದಾರೆ.

ನಿನ್ನೆ ರಾತ್ರಿ ಸುರಿದ ಮಳೆಗೆ ಮನೆಗಳೆಲ್ಲ ಜಲಾವೃತವಾಗಿವೆ. ಅರ್ಧಂಬರ್ಧ ಕಾಮಗಾರಿಯಿಂದ ಅವಾಂತರ ಸೃಷ್ಟಿಯಾಗಿದೆ. ಮಳೆ ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಜನ ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

# ತಗ್ಗಿದ ವರುಣನ ಆರ್ಭಟ:
ಕರ್ನಾಟಕದಲ್ಲಿ ಮುಂಗಾರು ಮುಕ್ತಾಯವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.8ರಷ್ಟು ಕಡಿಮೆ ಮಳೆಯಾಗಿದೆ. ಆದರೆ, ಶಾಹೀನ್ ಚಂಡಮಾರುತದ ಪರಿಣಾಮದಿಂದ ಇನ್ನೂ 3 ದಿನ ಅಂದರೆ ಅ.4ರವರೆಗೆ ಕರ್ನಾಟಕದಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ.

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವುದರಿಂದ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ. ಶುಕ್ರವಾರ ಮೈಸೂರು, ಚಾಮರಾಜನಗರ, ಮಂಡ್ಯದಲ್ಲಿ ಭಾರೀ ಮಳೆಯಾಗಿದ್ದು, ಇಂದು ಕೂಡ ಮಳೆ ಮುಂದುವರೆಯುವ ನಿರೀಕ್ಷೆಯಿದೆ.

ಕರ್ನಾಟಕದಲ್ಲಿ 4 ತಿಂಗಳ ಮುಂಗಾರು ಸೆ.30ಕ್ಕೆ ಅಂತ್ಯವಾಗಿದೆ. ಕರ್ನಾಟಕದಲ್ಲಿ ಈ ವರ್ಷ 852 ಮಿ.ಮೀ. ಮಳೆಯಾಗಬೇಕಿತ್ತು ಆದರೆ, 787 ಮಿ.ಮೀ. ಮಳೆ ದಾಖಲಾಗಿದೆ. ಕರ್ನಾಟಕ, ಕೇರಳ, ತಮಿಳುನಾಡು, ಲಕ್ಷದ್ವೀಪದಲ್ಲಿ ಇನ್ನೂ 3 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.