1 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ : ಅಧಿಕಾರಿಕಳಿಗೆ ಸಿಎಂ ಸೂಚನೆ

1 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ : ಅಧಿಕಾರಿಕಳಿಗೆ ಸಿಎಂ ಸೂಚನೆ

ಬೆಂಗಳೂರು,ಅ.18- ಮುಂದಿನ ಆರ್ಥಿಕ ವರ್ಷದೊಳಗೆ ಕರ್ನಾಟಕದ ಜಿಡಿಪಿ ದರವನ್ನು ಒಂದು ಟ್ರಿಲಿಯನ್ ಡಾಲರ್‍ಗೆ ಕೊಂಡೊಯ್ಯಲು ಕ್ರಿಯಾ ಯೋಜನೆ ರೂಪಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆರ್ಥಿಕ ತಜ್ಞರಾದ ಮೋಹನ್‍ದಾಸ್ ಪೈ ಮತ್ತು ದಿಶಾ ಹೊಳ್ಳ ಅವರು ತಯಾರಿಸಿದ $1 Trillion GDP Vision ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ದೇಶದ ಐದು ಪ್ರಮುಖ ರಾಜ್ಯಗಳಲ್ಲಿ ಮೂರನೇ ಅತಿಹೆಚ್ಚು ಜಿಡಿಪಿಯನ್ನು ಹೊಂದಿರುವ ಕರ್ನಾಟಕ ತಲಾ ಆದಾಯದಲ್ಲೂ ಮುಂಚೂಣಿಯಲ್ಲಿದೆ.

ಸೇವಾ ವಲಯದಲ್ಲಿ ಶೇ.66ರಷ್ಟು ಪಾಲನ್ನು ಹೊಂದಿದ್ದು, ಬರುವ ಆರ್ಥಿಕ ವರ್ಷದೊಳಗೆ ಒಂದು ಟ್ರಿಲಿಯನ್ ಗುರಿ ಹೊಂದಬೇಕು. ಅಧಿಕಾರಿಗಳು ಇದಕ್ಕೆ ತಕ್ಷಣವೇ ಕಾರ್ಯೋನ್ಮುಖರಾಗಿ ಕ್ರಿಯಾ ಯೋಜನೆ ರೂಪಿಸುವಂತೆ ಸೂಚನೆ ಕೊಟ್ಟರು.

ಸಾಂಕ್ರಾಮಿಕ ರೋಗದ ಹೊರತಾಗಿಯೂ 2022ರ ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು 273 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. 2026ರ ವೇಳೆಗೆ ಜಿಡಿಪಿ 500 ಬಿಲಿಯನ್‍ಗೆ ಹಾಗೂ 2030ರ ವೇಳೆಗೆ ಒಂದು ಟ್ರಿಲಿಯನ್ ತಲುಪಬೇಕು ಎಂದು ಸೂಚನೆ ನೀಡಿದರು.

ದೇಶದ ಒಟ್ಟು ಉದ್ಯೋಗಗಳಲ್ಲಿ ಕರ್ನಾಟಕ ಶೇ.11ರಷ್ಟು ಪಾಲನ್ನು ಹೊಂದಿದ್ದರೆ ಇದರಲ್ಲಿ 4.4 ಲಕ್ಷ ಜನರು 22ರಿಂದ 25 ವರ್ಷದ ವಯೋಮಾನದವರು. ಇದು ದೇಶದ ಶೇ.13ರಷ್ಟು ಪಾಲನ್ನು ಕರ್ನಾಟಕ ಹೊಂದಿದೆ ಎಂದು ಪ್ರಶಂಸಿಸಿದರು.

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.10ರಷ್ಟು ಜನರು 60 ವರ್ಷದವರಿಗಿಂತ ಹೆಚ್ಚಿನವರಾಗಿದ್ದಾರೆ. ಇದು 2031ಕ್ಕೆ ಶೇ.15ರಷ್ಟು ಹೆಚ್ಚಳವಾಗುತ್ತದೆ ಎಂದು ಅಂದಾಜಿಸಲಾಗಿದೆ ಎಂದರು. ಭಾರತವು ಶೇ.10 ಟ್ರಿಲಿಯನ್ ಗುರಿಯ ಅವಿಭಾಜ್ಯ ಅಂಗವಾಗಲು ನಮಗೆ ಹೆಚ್ಚಿನ ಅವಕಾಶವಿದೆ. 2026ರ ವೇಳೆಗೆ ಭಾರತ 5 ಟ್ರಿಲಿಯನ್ ಗುರಿ ಹೊಂದುವ ಯೋಜನೆ ಹಾಕಿಕೊಂಡಿದೆ. ನಮ್ಮಲ್ಲೂ ಸಾಕಷ್ಟು ಅವಕಾಶಗಳು ಇರುವುದರಿಂದ ಗುರಿ ತಲುಪಲೇಬೇಕೆಂದು ಹೇಳಿದರು.

ಕೃಷಿ ವಲಯವನ್ನು ತಂತ್ರಜ್ಞಾನ, ಬ್ರ್ಯಾಂಡಿಂಗ್, ಮಾರುಕಟ್ಟೆ ಮತ್ತು ರಪ್ತು ಮೂಲಕ ಉತ್ತೇಜಿಸುವುದು, ಕಾರ್ಮಿಕ ಆಧಾರಿತ ಕೈಗಾರಿಕೆಗಳ ಮೂಲಕ ಉತ್ಪಾದನೆ ಮತ್ತು ರಫ್ತುಗಳನ್ನು ಹೆಚ್ಚಳ ಮಾಡಬೇಕೆಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

ಮೂಲಭೂತ ಸೌಕರ್ಯಗಳಿಗೆ ವೆಚ್ಚವನ್ನು ಹೆಚ್ಚಿಸುವ ಮೂಲಕ ನಿರ್ಮಾಣ ವಲಯದ ಮೌಲ್ಯವರ್ಧನೆಯನ್ನುಉತ್ತೇಜಿಸುವುದು, ಬೆಂಗಳೂರು ಹೊರತುಪಡಿಸಿ – 200 ಸಣ್ಣಪಟ್ಟಣಗಳಲ್ಲಿ ವ್ಯವಸ್ಥಿತ ನಗರೀಕರ, ಉತ್ಪಾದನೆ ಮತ್ತು ರಫ್ತು ಕೈಗಾರಿಕೆಗಳ ಮೌಲ್ಯವರ್ಧನೆಯನ್ನು ಹೆಚ್ಚಿಸಲು ವಿಶೇಷವಾದ ಹೈಟೆಕ್ ಉದ್ಯಮಗಳ ಸೃಜನೆ ಬೆಳವಣಿಗೆಯ ದರಗಳನ್ನು ಹೆಚ್ಚಿಸಲು ಮಂಗಳೂರು ಬಂದರು ವಿಸ್ತರಣೆಗಾಗಿ ಅಗಾಧ ಸಂಭಾವ್ಯತೆಯನ್ನು ಪರಿಗಣಿಸಿ ಕರಾವಳಿ ಕಾರಿಡಾರ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದರ ಮೂಲಕ ರಫ್ತನ್ನು ಹೆಚ್ಚಿಸುವುದು, ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ಮೂಲಸೌಕರ್ಯ ವೆಚ್ಚವನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದರು.

ಅಭಿವೃದ್ಧಿಯನ್ನು ಉತ್ತೇಜಿಸಲು ಜನರ ಆರ್ಥಿಕ ಸಾಮಥ್ರ್ಯಗಳನ್ನು ಹೆಚ್ಚಿಸುವುದು, ಕೈಗಾರಿಕಾ, ಕೃಷಿ ಮತ್ತು ಸೇವಾ ಕ್ಷೇತ್ರಗಳಲ್ಲಿ ಉದ್ಯೋಗ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಕೈಗಾರಿಕಾ ವಲಯದ ಸಾಮಥ್ರ್ಯವನ್ನು ಹೆಚ್ಚಿಸುವುದರ ಮೂಲಕ ಕೃಷಿ ಮತ್ತು ಸೇವಾ ವಲಯದ ಬೆಳವಣಿಗೆಯನ್ನು ಕಾಣಬಹುದಾಗಿದೆ.

ಕೈಗಾರಿಕೆ ಮತ್ತು ಖಾಸಗಿ ವಲಯಗಳೆರಡೂ ಸಾಂಪ್ರದಾಯಿಕ ಬೆಳವಣಿಗೆಯ ಪಥವನ್ನು ಮುರಿಯಲು ಪರಿಹಾರಗಳನ್ನು ಕಂಡುಹಿಡಿಯಬೇಕು ಎಂದು ಸಿಎಂ ಸಲಹೆ ಮಾಡಿದರು.