ರಜೆಯಲ್ಲಿ ಬಂದ ಸೇನಾಯೋಧ ಮನೆಯಲ್ಲಿ ನೇಣಿಗೆ ಶರಣು

ರಜೆಯಲ್ಲಿ ಬಂದ ಸೇನಾಯೋಧ ಮನೆಯಲ್ಲಿ ನೇಣಿಗೆ ಶರಣು

ಹಾಸನ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಹಂಪನಗುಪ್ಪೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಹೆಚ್.ಯೋಗೇಶ್ (28) ಆತ್ಮಹತ್ಯೆಗೆ ಶರಣಾದ ಯೋಧ. ಈತ ಹಂಪನಗುಪ್ಪೆ ಗ್ರಾಮದ ರೈತ ಹರೀಶ್ ಎಂಬವರ ದ್ವಿತೀಯ ಪುತ್ರ. ಆತ್ಮಹತ್ಯೆಗೆ ಕಾರಣ ನಿಖರ ಕಾರಣ ತಿಳಿದುಬಂದಿಲ್ಲ. ಜ.4ರಂದು ಕರ್ತವ್ಯಕ್ಕೆ ರಜೆ ಹಾಕಿ ಗ್ರಾಮಕ್ಕೆ ಬಂದಿದ್ದ ಯೋಗೇಶ್ ಮಂಗಳವಾರ ಬೆಳಗ್ಗೆ ಹತ್ತು ಗಂಟೆಯಾದರೂ ರೂಂ ಬಾಗಿಲು ತೆರೆದಿರಲಿಲ್ಲ. ಬಾಗಿಲನ್ನು ಒಡೆದು ತೆಗೆದಾಗ ಯೋಗೇಶ್ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

2011ರಲ್ಲಿ ಹಾಸನದಲ್ಲಿ ನಡೆದ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಿ ಸೇನೆಗೆ ಸೇರ್ಪಡೆಯಾಗಿದ್ದ ಯೋಗೇಶ್, ಕಳೆದ ಎರಡು ವರ್ಷದ ಹಿಂದೆ ಮದುವೆಯಾಗಿದ್ದ. ದಂಪತಿಗೆ ಮಕ್ಕಳಿರಲಿಲ್ಲ. ರಜೆಯಲ್ಲಿ ಬಂದ ಬಳಿಕ ಪತ್ನಿ ದೀಕ್ಷಾ ಹಾಗೂ ಕುಟುಂಬಸ್ಥರೊಂದಿಗೆ ಲವಲವಿಕೆಯಿಂದಿದ್ದ. ಮಗನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.