"ಪ್ರತೀ ಕಂದಾಯ ವಿಭಾಗಕ್ಕೆ ವಿಮಾನ ನಿಲ್ದಾಣ'

"ಪ್ರತೀ ಕಂದಾಯ ವಿಭಾಗಕ್ಕೆ ವಿಮಾನ ನಿಲ್ದಾಣ'

ಬೆಂಗಳೂರು: ಎರಡು ಮತ್ತು ಮೂರನೇ ಹಂತದ ನಗರಗಳತ್ತ ಕೈಗಾರಿಕೆಗಳನ್ನು ಆಕರ್ಷಿಸಲು ಅಗತ್ಯ ಮತ್ತು ಅತ್ಯುತ್ತಮ ವಾತಾವರಣ ಕಲ್ಪಿಸಲು ಸಿದ್ಧತೆ ನಡೆಸಿರುವ ಸರಕಾರ, ಈ ನಿಟ್ಟಿನಲ್ಲಿ ರಾಜ್ಯದ ಪ್ರತೀ ಕಂದಾಯ ವಿಭಾಗಕ್ಕೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಉದ್ದೇಶಿಸಿದೆ.

ಈಗಾಗಲೇ ರಾಜ್ಯದ 11 ಕಡೆ ಗಳಲ್ಲಿ ವಿಮಾನ ನಿಲ್ದಾಣಗಳಿದ್ದು, ಹಂತ-ಹಂತವಾಗಿ ದೇಶೀಯ ವಿಮಾನಗಳ ಕಾರ್ಯಾಚರಣೆ ಅಲ್ಲಿ ಆಗಲಿದೆ. ಇದಲ್ಲದೆ, ದಾವಣಗೆರೆ, ಚಿಕ್ಕಮಗಳೂರು, ಹಾಸನ ಸೇರಿ ಮತ್ತೆ ಐದು ಕಡೆಗಳಲ್ಲಿ ವಿಮಾನ ನಿಲ್ದಾಣಗಳು ಮುಂದಿನ 18 ತಿಂಗಳಲ್ಲಿ ತಲೆಯೆತ್ತಲಿವೆ. ಆಗ ಪ್ರತೀ ನೂರು ಕಿ.ಮೀ.ಗೊಂದು ವಿಮಾನ ನಿಲ್ದಾಣ ಸೌಲಭ್ಯ ದೊರೆಯಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದರು.

ಹೂಡಿಕೆಗೆ ಪ್ರೋತ್ಸಾಹ
ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ “ಉದಯವಾಣಿ’ ಕಚೇರಿಗೆ ಭೇಟಿ ನೀಡಿ ಸಮಾವೇಶದ ಕುರಿತು ಸಂವಾದ ನಡೆಸಿದ ಅವರು, ರಾಜ್ಯದಲ್ಲಿ ಎರಡು ಮತ್ತು ಮೂರನೇ ಹಂತದ ನಗರಗಳತ್ತ ಕೈಗಾರಿಕೆಗಳನ್ನು ಕೊಂಡೊಯ್ಯಲು ಬೆಂಗಳೂರು ಆಚೆಗೆ ಹೂಡಿಕೆ ಮಾಡುವವರಿಗೆ ಸಾಕಷ್ಟು ಪ್ರೋತ್ಸಾಹಧನ ಮತ್ತು ರಿಯಾಯಿತಿಗಳನ್ನು ನೀಡಲಾಗಿದೆ ಎಂದು ಹೇಳಿದರು.

ಈ ಮಧ್ಯೆ ರಾಜ್ಯದ ವಿವಿಧ ಭಾಗಗಳಲ್ಲಿ ಕೈಗಾರಿಕಾ ಕಾರಿಡಾರ್‌ಗಳು ಕೂಡ ಹಾದುಹೋಗುತ್ತಿವೆ. ಇದು ಆಯಾ ಭಾಗದ ಉತ್ಪನ್ನಗಳಿಗೆ ಉತ್ತೇಜನ ನೀಡಲಿದೆ ಎಂದು ತಿಳಿಸಿದರು.

ಸಣ್ಣ ಕೈಗಾರಿಕೆಗಳಿಗೂ ವೇದಿಕೆ
ಇನ್ನು ಮೂರು ದಿನಗಳ ಕಾಲ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ ವೇದಿಕೆ ಕಲ್ಪಿಸಲಿದೆ. ದೊಡ್ಡ ಕೈಗಾರಿಕೆಗಳಿಗೆ ಪೂರಕವಾಗಿ ಬಿಡಿಭಾಗಗಳ ತಯಾರಿಕೆ ಕೈಗಾರಿಕೋದ್ಯಮಿಗಳಿಗೂ ಆಹ್ವಾನ ನೀಡಲಾಗಿದೆ. ಅವರು ನೇರವಾಗಿ ಉದ್ಯಮಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲೂ ಅವಕಾಶ ಇರಲಿದೆ. ಇದರಿಂದ ಉದ್ಯೋಗ ಸೃಷ್ಟಿಯೂ ನಿರೀಕ್ಷೆ ಮೀರಿ ಆಗಲಿದೆ ಎಂದು ಹೇಳಿದರು.

ಪರ್ಯಾಯ ಹುಮನಾಬಾದ್‌
ಬೆಂಗಳೂರಿಗೆ ಹೊಂದಿಕೊಂಡಿ ರುವ ತಮಿಳುನಾಡಿನ ಹೊಸೂರು ಮಾದರಿಯಲ್ಲಿ ಉತ್ತರ ಕರ್ನಾಟಕದ ಹುಮನಾಬಾದ್‌ ಅನ್ನು ಕೈಗಾರಿಕಾ ಪ್ರದೇಶವನ್ನಾಗಿ ರೂಪಿಸಲಾಗುವುದು ಎಂದು ಸಚಿವ ಮುರುಗೇಶ್‌ ನಿರಾಣಿ ಹೇಳಿದರು.

ನಾಲ್ಕು ನಗರಗಳಲ್ಲಿ ಇಂಡಸ್ಟ್ರಿಯಲ್‌ ರೆಸಿಡೆನ್ಶಿಯಲ್‌ ಕಾರಿಡಾರ್‌ ನಿರ್ಮಾಣ
ನಾಲ್ಕೂ ಕಂದಾಯ ವಿಭಾಗಗಳಲ್ಲಿನ ನಾಲ್ಕು ನಗರಗಳಲ್ಲಿ ತಲಾ ಒಂದು ಇಂಡಸ್ಟ್ರಿಯಲ್‌ ರೆಸಿಡೆನ್ಶಿಯಲ್‌ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳು ರಾಜಧಾನಿಗೇ ಮಾದರಿಯಾಗಲಿವೆ. ಮತ್ತೂಂದೆಡೆ ಹೆದ್ದಾರಿ, ವಿಮಾನ ನಿಲ್ದಾಣ ಸಂಪರ್ಕದ ಜತೆಗೆ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಇರಲಿವೆ. ಇದನ್ನು ಬಜೆಟ್‌ನಲ್ಲೂ ಘೋಷಿಸಲಾಗಿದ್ದು, ಈ ಸಂಬಂಧ ಭೂಮಿಯ ಹುಡುಕಾಟ ನಡೆದಿದೆ ಎಂದು ಹೇಳಿದರು.

ದ.ಕ., ಉಡುಪಿಯತ್ತಲೂ ಚಿತ್ತ
ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಕೈಗಾರಿಕೆ ಪ್ರದೇಶಗಳಲ್ಲಿನ ಮೂಲಸೌಕರ್ಯ ಕೊರತೆ ಕುರಿತು ವಿಶೇಷವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದರು. ಕೈಗಾರಿಕೆ ಪ್ರದೇಶಗಳಲ್ಲಿ ಸಂಗ್ರಹವಾಗುವ ತೆರಿಗೆಯ ಪೈಕಿ ಇಂತಿಷ್ಟು ಮೀಸಲಿಟ್ಟು ಆಯಾ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಬಳಕೆ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

“ಉದಯವಾಣಿ’ ಸರಣಿ ವರದಿ ಪ್ರಸ್ತಾವ
ದಕ್ಷಿಣ ಕನ್ನಡ ಹಾಗೂ ಉಡುಪಿ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ ಕುರಿತ ಉದಯವಾಣಿಯ ಸರಣಿ ವರದಿಯನ್ನು ಪ್ರಸ್ತಾವಿಸಿದ ಸಚಿವರು, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.