ಚಿಂತಿ ಮಾಡಬೇಡ್ರಿ ಮುಂದಾ ನಾನ ಮುಖ್ಯಮಂತ್ರಿ' ಸಿಎಂ ಬೊಮ್ಮಾಯಿ ಹೇಳಿಕೆಯಿಂದ ಬಿಜೆಪಿಯಲ್ಲಿ ಗೊಂದಲ

ಚಿಂತಿ ಮಾಡಬೇಡ್ರಿ ಮುಂದಾ ನಾನ ಮುಖ್ಯಮಂತ್ರಿ' ಸಿಎಂ ಬೊಮ್ಮಾಯಿ ಹೇಳಿಕೆಯಿಂದ ಬಿಜೆಪಿಯಲ್ಲಿ ಗೊಂದಲ

ಬೊಮ್ಮಾಯಿ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎನ್ನುತ್ತಿರುವ ಬಿಜೆಪಿ ನಾಯಕರು ಇದೇ ವೇಳೆಯಲ್ಲಿ ಸಾಮೂಹಿಕ ನಾಯಕತ್ವ ಎಂಬ ಸಂದೇಶ ಜಪಿಸುತ್ತಿದ್ದಾರೆ. ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ನಾನೇ ಮುಂದಿನ ಸಿಎಂ ಎಂದು ಹೇಳಿದ್ದಾರೆ. ಸಹಜವಾಗಿ ಚರ್ಚೆಯ ಡೋರ್ ಓಪನ್ ಆಗಿದೆ

ನಮಗೆ ಆಶೀರ್ವಾದ ಮಾಡಿ ಎಂದು ಕೇಳಿದ ಸಿಎಂ

ಚುನಾವಣಾ ಅಖಾಡ ರಂಗೇರುತ್ತಿದೆ. ರಣಕಣದಲ್ಲಿ ರಾಜಕೀಯದ ಘಟಾನುಘಟಿ ನಾಯಕರು ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಹಾಗೂ ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಬಗ್ಗೆ ಲೆಕ್ಕಾಚಾರ ಶುರುವಾಗಿದೆ. ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಯಾರು ಅನ್ನೋ ಚರ್ಚೆಯ ಸುತ್ತ ಗೊಂದಲ ಇರೋದು ರಾಜ್ಯ ರಾಜಕಾರಣಕ್ಕೆ ಹೊಸದೇನಲ್ಲ. ಇದೀಗ ಇಂತದ್ದೇ ಗೊಂದಲದ ಗಾಳಿ ಬಿಜೆಪಿಯಲ್ಲು ಬೀಸಲು ಶುರುವಾದಂತೆ ಕಂಡುಬರುತ್ತಿದೆ.

ಮುಂದಿನ ಸಿಎಂ ಅಭ್ಯರ್ಥಿ ಘೋಷಿಸದೆ ಬಿಜೆಪಿ ಹೈಕಮಾಂಡ್ ಜಾಣ ನಡೆ ಅನುಸರಿಸುತ್ತಿದೆ. ಸಾಮೂಹಿಕ ನಾಯತ್ವದ ಮಂತ್ರ ಜಪಿಸುತ್ತಿದೆ. ಈ ನಡುವೆ ರಾಜ್ಯದಲ್ಲಿ ಮಿಂಚಿನ ಸಂಚಾರ ನಡೆಸುತ್ತಿರುವ ಸಿಎಂ ಬೊಮ್ಮಾಯಿ. ಮುಂದಿನ ಸಿಎಂ ನಾನೇ ಎಂದು ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ನವ ಕರ್ನಾಟಕ, ನವ ಭಾರತ ನಿರ್ಮಾಣ ನಮ್ಮ ಕನಸು. ಮುರುಗೇಶ್ ನಿರಾಣಿ ಬೀಳಗಿಯಲ್ಲಿ ಸಾವಿರಾರು ಕೋಟಿ ಕೆಲಸವನ್ನ ಮಾಡಿದ್ದಾರೆ. ಆದ್ರೆ ಅಲ್ಲಿಗೆ ನನ್ನನ್ನೇ ಕರೆದುಕೊಂಡು ಹೋಗಿಲ್ಲ. ಚಿಂತಿ ಮಾಡಬ್ಯಾಡ್ರಿ, ಮುಂದೇ ನಾನೇ ಸಿಎಂ ಆಗ್ತೀನಿ. ನಾನೇ ಬರುತ್ತೀನಿ ಎಂದು ಕೇಂದ್ರ ಸಚಿವ ನಿರಾಣಿಗೆ ಸಿಎಂ ಬೊಮ್ಮಾಯಿ ನಗುನಗುತ್ತಲೇ ಕಾಲೆಳೆದರು.

'ಮುಂದೇ ನಾನೇ ಸಿಎಂ ಆಗ್ತೀನಿ'

ಬೀಳಗಿ ಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ಸಾವಿರಾರು ಅಭಿವೃದ್ಧಿಯನ್ನು ಮುರುಗೇಶ್​ ನಿರಾಣಿ ಮಾಡಿದ್ದಾರೆ. ಆದರೆ ಮುರುಗೇಶ್​ ನನ್ನ ಕರೆದುಕೊಂಡು ಹೋಗಿಲ್ಲ ಅಲ್ಲಿಗೆ. ಎಲ್ಲಿ ಕರೆದುಕೊಂಡು ಹೋದರೇ ಗೊತ್ತಾಗುತ್ತೆಂದು ಕರೆದುಕೊಂಡು ಹೋಗಿಲ್ಲ. ಚಿಂತಿ ಮಾಡಬೇಡ್ರಿ ಮುಂದಾ ನಾನ ಮುಖ್ಯಮಂತ್ರಿಯಾಗಿ ಬರುತ್ತೀನಿ.

ಬಸವರಾಜ್ ಬೊಮ್ಮಾಯಿ, ಸಿಎಂ

ಇನ್ನು ಮೊನ್ನೆ ಮೊನ್ನೆಯಷ್ಟೇ ಮಾಜಿ ಸಿಎಂ ಯಡಿಯೂರಪ್ಪ ನೀಡಿದ್ದ ಹೇಳಿಕೆ ಹಾಗೂ ಇದೀಗ ಸಿಎಂ ಬೊಮ್ಮಾಯಿ ನೀಡಿರೋ ಹೇಳಿಕೆ ಭಿನ್ನವಾಗಿದೆ. ಮುಂದಿನ ಸಿಎಂ ಬಗ್ಗೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಚುನಾವಣಾ ಫಲಿತಾಂಶ ಪ್ರಕಟವಾದ ನಂತರವೇ ಮುಂದಿನ ಸಿಎಂ ಘೋಷಿಸಲಾಗುತ್ತೆ ಎಂದು ಯಡಿಯೂರಪ್ಪ ದೆಹಲಿಯತ್ತ ಕೈ ತೋರಿಸಿದ್ದರು. ಆದ್ರೀಗ ಬೊಮ್ಮಾಯಿ ನಾನೇ ಮುಂದೇ ಸಿಎಂ ಆಗ್ತೀನಿ ಎಂದಿದ್ದಾರೆ.