ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ನಾಳೆ `ವಿದ್ಯಾನಿಧಿ ಯೋಜನೆ'ಯಡಿ ಫಲಾನುಭವಿಗಳ ಖಾತೆಗೆ ಹಣ ಜಮಾ

ಬೆಂಗಳೂರು : ರಾಜ್ಯ ಸರ್ಕಾರವು ಆಟೋರಿಕ್ಷಾ, ಮೋಟಾರು ಕ್ಯಾಬ್ ಚಾಲಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಿದ್ದು, ಇದೀಗ ಆಟೋರಿಕ್ಷಾ ಚಾಲಕರು ಹಾಗೂ ಮೋಟಾರು ಕ್ಯಾಬ್ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಸ್ಕಾಲರ್ ಶಿಪ್ ನೀಡಲಾಗುತ್ತಿದ್ದು, ನಾಳೆ ಸಿಎಂ ಬೊಮ್ಮಾಯಿ ಫಲಾನುಭವಿಗಳ ಖಾತೆಗೆ ನಗದು ನೇರ ವರ್ಗಾವಣೆ ಮಾಡಲಿದ್ದಾರೆ.
ಮಾರ್ಚ್ 23ರ ನಾಳೆ ಬೆಳಗ್ಗೆ 10.30 ಕ್ಕೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 15,000 ಫಲಾನುಭವಿಗಳ ಬ್ಯಾಂಕ್ ಖಾತೆಗೆ ನಗದು ನೇರ ವರ್ಗಾವಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.
ಕರ್ನಾಟಕದ ಆಟೋರಿಕ್ಷಾ ಚಾಲಕರು, ಹಳದಿ ಬೋರ್ಡ್ ಮೋಟಾರು ಕ್ಯಾಬ್ ಚಾಲಕರ ಮಕ್ಕಳು ಉನ್ನತ ವಿಧ್ಯಾಭ್ಯಾಸ ಕೈಗೊಳ್ಳುವ ನಿಟ್ಟಿನಲ್ಲಿ ವಿದ್ಯಾನಿಧಿ ಯೋಜನೆಯಡಿ ವಾರ್ಷಿಕ ಶಿಷ್ಯವೇತನ ನೀಡಲು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಪಿಯುಸಿ, ಐಟಿಐ, ಡಿಪ್ಲೋಮಾ ಮುಂತಾದ ಪದವಿಗೂ ಮುನ್ನ ಪಡೆಯುವ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ರೂ. 2500 ಹಾಗೂ ವಿದ್ಯಾರ್ಥಿನಿಯರಿಗೆ ರೂ. 3000. ಬಿಎ, ಬಿಎಸ್ಸಿ, ಬಿಕಾಂ ಮುಂತಾದ ಪದವಿ ವ್ಯಾಸಂಗ ಮಾಡುವ (ಎಂಬಿಬಿಎಸ್, ಬಿಇ, ಬಿಟೆಕ್ ಮತ್ತು ವೃತ್ತಿಪರ ಕೋರ್ಸ್ಗಳನ್ನು ಹೊರತುಪಡಿಸಿ) ವಿದ್ಯಾರ್ಥಿಗಳಿಗೆ ರೂ. 5000, ವಿದ್ಯಾರ್ಥಿನಿಯರಿಗೆ ರೂ. 5500. ಎಲ್.ಎಲ್.ಬಿ, ಪ್ಯಾರಾಮೆಡಿಕಲ್, ಬಿ.ಫಾರ್ಮ್, ನರ್ಸರಿ ಇತ್ಯಾದಿ ವೃತ್ತಿಪರ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ರೂ. 7500, ವಿದ್ಯಾರ್ಥಿನಿಯರಿಗೆ ರೂ. 8000. ಎಂ.ಬಿ.ಬಿ.ಎಸ್., ಬಿ.ಇ., ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ರೂ. 10,000, ವಿದ್ಯಾರ್ಥಿನಿಯರಿಗೆ ರೂ. 11,000 ಗಳ ವಾರ್ಷಿಕ ಶಿಷ್ಯ ವೇತನ ನೀಡಲಾಗುವುದು.