ಪಾಂಡವಪುರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಪುನೀತೋತ್ಸವ; ಹಲವು ಗಾಯಕರಿಂದ ರಸಮಂಜರಿ

ಪಾಂಡವಪುರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಪುನೀತೋತ್ಸವ; ಹಲವು ಗಾಯಕರಿಂದ ರಸಮಂಜರಿ

ಮಂಡ್ಯ: ಜಿಲ್ಲೆಯ ಪಾಂಡವಪುರದ ಕ್ರೀಡಾಂಗಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಪುನೀತೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಡಾ.ರಾಜ್ ಕುಮಾರ್ ಅಪ್ಪಟ ಅಭಿಮಾನಿಯೂ ಆಗಿರುವ ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎಸ್​​.ಪುಟ್ಟರಾಜು ನೇತೃತ್ವದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಸಂಜೆ ನಟ ನಿಖಿಲ್ ಕುಮಾರಸ್ವಾಮಿ ಅವರು ಚಾಲನೆ ನೀಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್​ನ ಹಲವು ನಟ ಮತ್ತು ನಟಿಯರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಗಾಯಕ ವಿಜಯ ಪ್ರಕಾಶ್ ಹಾಗೂ ಗಾಯಕಿ ಅನನ್ಯ ಭಟ್ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ, ಸ್ಟಾರ್ ಹಾಸ್ಯ ನಟರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಕೂಡ ನಡೆಯಲಿದೆ.

ಪಾಂಡವಪುರ ಪಟ್ಟಣದಲ್ಲಿ ಮೂರು ದಿನ ನಡೆಯುವ ಈ ಅಪ್ಪು ಉತ್ಸವದಲ್ಲಿ ಪುನೀತ್ ರಾಜ್​ಕುಮಾರ್ ಅವರ ಫ್ಲೆಕ್ಸ್ ಹಾಗೂ ಬ್ಯಾನರ್​ಗಳು ರಾರಾಜಿಸುತ್ತಿವೆ. ಕಾರ್ಯಕ್ರಮವನ್ನು ಹಬ್ಬದಂತೆ ಆಚರಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಶಾಸಕ ಪುಟ್ಟರಾಜು ಅವರು ಪಾಂಡವಪುರದಲ್ಲಿ ಮನವಿ ಮಾಡಿಕೊಂಡಿದ್ದಾರೆ.