ಮೋರ್ಬಿ ತೂಗು ಸೇತುವೆ ದುರಂತಕ್ಕೇನು ಕಾರಣ

ನವದೆಹಲಿ, ನವೆಂಬರ್ 01: ಗುಜರಾತಿನ ಶತಮಾನದಷ್ಟು ಹಳೆಯದಾದ ಸೇತುವೆಯ ದುರಂತದ ಹಿಂದಿನ ಕಾರಣಗಳೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದರ ಮಧ್ಯೆ ಕೆಲವು ಕಾರಣಗಳು ಗೊತ್ತಾಗಿವೆ.
ಹಳೆಯ ಕೇಬಲ್‌ಗಳನ್ನು ಖಾಸಗಿ ಸಂಸ್ಥೆಯೊಂದು ಏಳು ತಿಂಗಳ ನವೀಕರಣದ ಸಮಯದಲ್ಲಿ ಬದಲಾಯಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಗುಜರಾತ್‌ನ ಮೋರ್ಬಿಯ ತೂಗು ಸೇತುವೆಯ ದುರಂತವು ದೇಶವೇ ಬೆಚ್ಚಿ ಬೀಳುವಂತೆ ಮಾಡಿದೆ. ಸೇತುವೆ ನವೀಕರಣದ ಸಂದರ್ಭದಲ್ಲಿ ಮಾಡಿರುವ ಎಡವಟ್ಟುಗಳು ಹೇಗೆ ಅಮಾಯಕರ ಜೀವವನ್ನು ಕಿತ್ತುಕೊಂಡವು ಎಂಬುದರ ಬಗ್ಗೆ ಮತ್ತಷ್ಟು ತನಿಖೆ ನಡೆಸಬೇಕಾಗಿದೆ. ಇದರ ಹೊರತಾಗಿ ಸೇತುವೆ ದುರಂತಕ್ಕೆ ಯಾವೆಲ್ಲ ಅಂಶಗಳು ಕಾರಣವಾಗಿವೆ ಎಂಬುದನ್ನು ಮುಂದೆ ವಿವರಿಸಲಾಗಿದೆ.
ಮೋರ್ಬಿ ತೂಗು ಸೇತುವೆ ದುರಂತಕ್ಕೇನು ಕಾರಣ?:
* ಈ ಸೇತುವೆಯನ್ನು ನವೀಕರಿಸಿದ ಗುಜರಾತ್ ಮೂಲದ ವಾಚ್‌ಮೇಕರ್ ಒರೆವಾ ಸಂಸ್ಥೆಗೆ ಮಾರ್ಚ್‌ನಲ್ಲಿ ಮೊರ್ಬಿ ನಗರ ಪುರಸಭೆಯಿಂದ ಗುತ್ತಿಗೆ ನೀಡಲಾಯಿತು. ಈ ವೇಳೆ ಯಾವುದೇ ಟೆಂಡರ್ ಮಾರ್ಗವನ್ನು ತೆಗೆದುಕೊಂಡಿಲ್ಲ ಎಂದು ಒಪ್ಪಂದದ ದಾಖಲೆ ತೋರಿಸುತ್ತದೆ. ಈ ಸೇತುವೆಯ ನವೀಕರಣದ ನಂತರದಲ್ಲೂ ಹಳೆಯ ತಂತಿಗಳನ್ನು ಬಳಸಿರುವುದು ಗೊತ್ತಾಗಿದೆ.
ಗುಜರಾತಿನ ವಿಧಿವಿಜ್ಞಾನ ಪ್ರಯೋಗಾಲಯವು ಜನರ ಭಾರೀ ನೂಕುನುಗ್ಗಲಿನ ಭಾರದಿಂದ ಸೇತುವೆ ಕುಸಿದಿದೆ ಎಂದು ಹೇಳಿದೆ. ವಿಧಿವಿಜ್ಞಾನ ತಂಡವು ವಿಶ್ಲೇಷಣೆಗಾಗಿ ಕತ್ತರಿಸುವ ಉಪಕರಣಗಳೊಂದಿಗೆ ಸೇತುವೆಯ ಲೋಹದ ಮಾದರಿಗಳನ್ನು ಹೊರತೆಗೆದಿದೆ.
* ಹೆಚ್ಚಾಗಿ ಸೇರಿಕೊಂಡಿದ್ದ ಜನಸಮೂಹವು ಸೇತುವೆಯ ರಚನಾತ್ಮಕ ಸಮಗ್ರತೆಯ ಮೇಲೆ ಒತ್ತಡ ಹೇರಿದ್ದು, ದುರಂತಕ್ಕೆ ಕಾರಣವಾಯಿತು ಎಂದು ವಿಧಿವಿಜ್ಞಾನ ತಂಡದ ಮೂಲಗಳು ತಿಳಿಸಿವೆ.
* ಲೋಹದ ಕೇಬಲ್‌ಗಳು ದಾರಿ ಮಾಡಿಕೊಟ್ಟಾಗ ನದಿಗೆ ಬೀಳುವ ಮೊದಲು ಕೆಲವರು ಸೇತುವೆಯನ್ನು ತಿರುಗಿಸಲು ಪ್ರಯತ್ನಿಸುತ್ತಿದ್ದರೆ, ಇನ್ನು ಕೆಲವು ಜನರ ಗುಂಪು ಸೇತುವೆ ಕುಸಿತಕ್ಕೂ ಸ್ವಲ್ಪ ಮೊದಲು ಫೋಟೋಗಳನ್ನು ತೆಗೆದುಕೊಳ್ಳುವುದರಲ್ಲಿ ತೊಡಗಿದ್ದರು.
* ಈ ಸೇತುವೆಯನ್ನು ಮತ್ತೆ ತೆರೆಯುವ ಬಗ್ಗೆ ಓರೆವಾ ಅಧಿಕಾರಿಗಳಿಗೆ ತಿಳಿಸಿಲ್ಲ. ಹಾಗೆ ಮಾಡಲು ಕಂಪನಿಗೆ ಫಿಟ್‌ನೆಸ್ ಪ್ರಮಾಣಪತ್ರವನ್ನು ನೀಡಲಾಗಿಲ್ಲ ಎಂದು ಪುರಸಭೆಯ ಮುಖ್ಯಾಧಿಕಾರಿ ಸಂದೀಪ್‌ಸಿಂಗ್ ಝಾಲಾ ಹೇಳಿದರು. ಈ ಆರೋಪಕ್ಕೆ ಓರೆವಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನವೀಕರಣದ ತಾಂತ್ರಿಕ ಅಂಶವನ್ನು" ಚಿಕ್ಕ ನಿರ್ಮಾಣ ಕಂಪನಿಯಾದ ದೇವಪ್ರಕಾಶ್ ಸೊಲ್ಯೂಷನ್ಸ್‌ಗೆ ಹೊರಗುತ್ತಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.
* ಕಳೆದ ವಾರ ಸೇತುವೆಯನ್ನು ತೆರೆಯುವ ಸಂದರ್ಭದಲ್ಲಿ, ಓರೆವಾ ವ್ಯವಸ್ಥಾಪಕ ನಿರ್ದೇಶಕ ಜಯಸುಖ್‌ಭಾಯ್ ಪಟೇಲ್, ಕಂಪನಿಯು "2 ಕೋಟಿ ರೂಪಾಯಿಯಲ್ಲಿ ಶೇ.100 ರಷ್ಟು ನವೀಕರಣವನ್ನು ಮಾಡಿದೆ" ಎಂದು ಹೇಳಿದ್ದರು.
* ಈ ದುರಂತದ ಬಗ್ಗೆ ಪೊಲೀಸರು ಪ್ರಥಮ ಮಾಹಿತಿ ವರದಿ ಅಥವಾ ಎಫ್‌ಐಆರ್ ದಾಖಲಿಸಿದ ನಂತರ ಒಂಬತ್ತು ಜನರನ್ನು ಬಂಧಿಸಲಾಗಿದೆ. ಅವರಲ್ಲಿ ಒರೆವ ವ್ಯವಸ್ಥಾಪಕರು, ಟಿಕೆಟ್ ಕಲೆಕ್ಟರ್‌ಗಳು, ಸೇತುವೆ ರಿಪೇರಿ ಗುತ್ತಿಗೆದಾರರು ಮತ್ತು ಮೂವರು ಸೆಕ್ಯುರಿಟಿ ಗಾರ್ಡ್‌ಗಳು ಜನಸಂದಣಿಯನ್ನು ನಿಯಂತ್ರಿಸುವುದು ಅವರ ಕೆಲಸವಾಗಿತ್ತು.
* ಮಚ್ಚು ನದಿಯಲ್ಲಿನ ಶೋಧ ಕಾರ್ಯಾಚರಣೆಯನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಮಂಗಳವಾರ ಬೆಳಿಗ್ಗೆ ಅದನ್ನು ಪುನರಾರಂಭಿಸಲಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಮೃತದೇಹಗಳು ಕೆಸರಿನ ನೀರಿನಲ್ಲಿ ಸಿಲುಕಿರುವ ಆತಂಕವಿದೆ ಎಂದು ಹೇಳಿದ್ದಾರೆ.
* ಇದೇ ಸೇತುವೆಯ ಎರಡೂ ತುದಿಗಳಿಗೆ ಸಮೀಪದಲ್ಲಿದ್ದ ಅನೇಕ ಜನರು ಕೆಳಗೆ ನೀರಿಲ್ಲದೇ ಕೇವಲ ಗಟ್ಟಿಯಾದ ನೆಲವಿದ್ದಕ್ಕೆ ಮಾತ್ರ ಮೃತಪಟ್ಟಿದ್ದಾರೆ. ಈ ಸೇತುವೆಯ ಮಧ್ಯದಲ್ಲಿದ್ದವರು ನದಿಗೆ ಬಿದ್ದು ನೀರಿನಲ್ಲಿ ಮುಳುಗಿದ್ದಾರೆ ಎಂದು ಗೊತ್ತಾಗಿದೆ.