ವಕೀಲೆ ಜತೆ ಅನುಚಿತವಾಗಿ ವರ್ತಿಸಿದ ಇನ್ಸ್ಪೆಕ್ಟರ್; ಸಿಪಿಐ ವಿರುದ್ಧ ಎಫ್ಐಆರ್

ಧಾರವಾಡ: ವಕೀಲೆಯೊಬ್ಬರ ಜತೆ ಅನುಚಿತವಾಗಿ ವರ್ತಿಸಿದ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಧಾರವಾಡ ಗ್ರಾಮೀಣ ಸಿಪಿಐ ಮಂಜುನಾಥ ಕುಸಗಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ವಕೀಲೆಯೊಬ್ಬರ ಜತೆ ಸಿಪಿಐ ಮಂಜುನಾಥ ಕುಸಗಲ್ ಅನುಚಿತವಾಗಿ ವರ್ತಿಸಿದ್ದರು ಎಂಬ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.
ಹೀಗಾಗಿ ಪೊಲೀಸರ ವರ್ತನೆ ಖಂಡಿಸಿ ಧಾರವಾಡ ವಕೀಲರು ಪ್ರತಿಭಟನೆ ನಡೆಸಿದ್ದರು. ಸುಮಾರು 3 ಗಂಟೆ ಕಾಲ ಜ್ಯುಬಿಲಿ ಸರ್ಕಲ್ ಬಂದ್ ಮಾಡಿದ್ದ ವಕೀಲರು, ಪೊಲೀಸರ ನಡೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ವಕೀಲರ ಪ್ರತಿಭಟನೆ ಹಿನ್ನೆಲೆಯಲ್ಲಿ ಎಸ್ಪಿ ಲೋಕೇಶ್ ಜಗಲಾಸರ್ ಮಧ್ಯಪ್ರವೇಶ ಮಾಡಿದ್ದರು. ಆಗ ವಕೀಲರು ಸಿಪಿಐ ವಿರುದ್ಧ ಎಫ್ಐಆರ್ ದಾಖಲಾಗಬೇಕು ಎಂದು ಆಗ್ರಹಿಸಿದ್ದರು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು. ಹೀಗಾಗಿ ಕೊನೆಗೂ ಸಿಪಿಐ ವಿರುದ್ಧ ಎಫ್ಐಆರ್ ದಾಖಲಾಗಿದೆ.