ದಾವಣಗೆರೆಯಲ್ಲಿ 6 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ: ಡಿಸಿ ಮಾಹಿತಿ

ದಾವಣಗೆರೆ, ಮೇ 18: ದಾವಣಗೆರೆ ಜಿಲ್ಲೆಯಲ್ಲಿ ಆರು ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮಾಹಿತಿ ನೀಡಿದ್ದಾರೆ. ಸದ್ಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ 1, ಎಸ್‍ಎಸ್ ಆಸ್ಪತ್ರೆಯಲ್ಲಿ 1 ಹಾಗೂ ಬಾಪೂಜಿ ಆಸ್ಪತ್ರೆಯಲ್ಲಿ 4 ರೋಗಿಗಳಿದ್ದು, ಬ್ಲ್ಯಾಕ್ ಫಂಗಸ್ ಪ್ರಕರಣಗಳಿಗೆ ಸೂಕ್ತ ಚಿಕಿತ್ಸಾ ವಿಧಾನ ಹಾಗೂ ಔಷಧಿ ಸದ್ಯ ಜಿಲ್ಲೆಯಲ್ಲಿ ಲಭ್ಯವಿಲ್ಲ ಎಂದು ಸಿಎಂ ಜೊತೆ ನಡೆದ ವಿಡಿಯೋ ಸಂವಾದದ ವೇಳೆ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ, ಅಲ್ಲದೆ ಅಧಿಕಾರಿಗಳು, ವೈದ್ಯರ ಪರಿಶ್ರಮದಿಂದ ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ಅನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ರೆಮ್‍ಡೆಸಿವರ್ ಔಷಧಿ ಸರ್ಕಾರಿ ಆಸ್ಪತ್ರೆಗಳಿಗಾಗಿ ಸಮರ್ಪಕವಾಗಿ ಜಿಲ್ಲೆಗೆ ಪೂರೈಕೆಯಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಿಂದ ಬೇಡಿಕೆ ಇದೆ ಎಂದರು. ದಾವಣಗೆರೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5.32 ಲಕ್ಷ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿತ್ಯ ಸರಾಸರಿ 2 ಸಾವಿರ ಟೆಸ್ಟ್ ಮಾಡಲಾಗುತ್ತಿದೆ. ರಾಜ್ಯದ ಸರಾಸರಿಗೆ ಹೋಲಿಸಿದಾಗ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಕಡಿಮೆ ಇದೆ. ಆದರೂ ಜಿಲ್ಲೆಯಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸಲಾಗುತ್ತಿದೆ. 2ನೇ ಅಲೆ ಪ್ರಾರಂಭವಾದಾಗಿನಿಂದ ಈವರೆಗೆ ಒಟ್ಟು 48 ಜನರು ಮೃತಪಟ್ಟಿದ್ದು, ಐಎಲ್‍ಐ ಪ್ರಕರಣಗಳು ಸೇರಿ ಒಟ್ಟು 78 ಸಾವು ಸಂಭವಿಸಿದೆ. ಜಿಲ್ಲೆಯಲ್ಲಿ ಸದ್ಯ 3656 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆಯಲ್ಲಿಯೂ ಬ್ಲ್ಯಾಕ್ ಫಂಗಸ್‍ನ 6 ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಸುಧಾಕರ್ ಅವರು, ಬ್ಲ್ಯಾಕ್ ಫಂಗಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯದ ಶಿವಮೊಗ್ಗ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು ಹಾಗೂ ಮೈಸೂರಿನಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಗುರುವಾರದಿಂದ ಪ್ರಾರಂಭವಾಗಲಿದ್ದು, ಅದರನ್ವಯ ರೋಗಿಗಳನ್ನು ಸಮೀಪದ ಜಿಲ್ಲೆಗೆ ಸ್ಥಳಾಂತರಿಸಬೇಕಾಗುತ್ತದೆ ಎಂದರು.

ದಾವಣಗೆರೆಯಲ್ಲಿ 6 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ: ಡಿಸಿ ಮಾಹಿತಿ