ಪೊಲೀಸರಿಂದ ಎಂಜಿಲು ತಿನ್ನುವ ನಾಯಿಗಳ ಬಗ್ಗೆ ಮಾತನಾಡಿ ಗೃಹ ಸಚಿವರೇ?

ಬೆಂಗಳೂರು, ಡಿ. 05: ಪೊಲಿಸರ ಭ್ರಷ್ಟಾಚಾರದ ಬಗ್ಗೆ ಗೃಹ ಸಚಿವರು ನೀಡಿದ "ನೀವು ಪೊಲೀಸರು ನಾಯಿಗಳಿದ್ದಂತೆ" ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಹಣವಿಲ್ಲದೇ ಯಾವ ಗೃಹ ಸಚಿವರು ವರ್ಗಾವಣೆ ಮಾಡಿದ್ದಾರೆ? ಪೊಲೀಸರಿಂದ ಎಂಜಿಲು ಪಡೆಯುವರ ಬಗ್ಗೆಯೂ ಗೃಹ ಸಚಿವರು ಮಾತನಾಡಲಿ ಎಂಬ ಆಕ್ರೋಶ ವ್ಯಕ್ತವಾಗಿದೆ.
ಪೊಲೀಸರನ್ನು ಎಂಜಿಲು ಕಾಸು ತಿನ್ನುವ ನಾಯಿಗಳು ಎಂದು ಗೃಹ ಸಚಿವರು ವಾಖ್ಯಾನಿಸಿದ್ದಾರೆ. ಅದೇ ರೀತಿ ಪೊಲೀಸರಿಂದಲೂ ಎಂಜಿಲು ಕಾಸು ತಿನ್ನುವ ದಲ್ಲಾಳಿಗಳ ಬಗ್ಗೆ ಗೃಹ ಸಚಿವರು ಮಾತನಾಡಲಿ, ಯಾವ ವರ್ಗಾವಣೆ ಹಣವಿಲ್ಲದೇ ಮಾಡುತ್ತಿದ್ದಾರೆ ? ವರ್ಗಾವಣೆ ಎಂಜಿಲು ದಂಧೆ ಗೃಹ ಸಚಿವರಿಗೆ ಗೊತ್ತಿಲ್ಲವೇ? ಪ್ರತಿಷ್ಠಿತ ಠಾಣೆಗಳಿಗೆ ಇಂತಿಷ್ಟು ಕೊಟ್ಟೆ ಪೊಲೀಸ್ ಅಧಿಕಾರಿಗಳು ವರ್ಗಾವಣೆಯಾಗಬೇಕು.
ಶಾಸಕರು, ಇಲ್ಲದಿದ್ದರೆ ಸಚಿವರು, ಇಬ್ಬರೂ ಇಲ್ಲ ಎಂದರೆ ಕೇಂದ್ರ ಕಚೇರಿ, ಇದರ ಜತೆಗೆ ದಲ್ಲಾಳಿಗಳು, ಈ ಬಗ್ಗೆಯೂ ಗೃಹ ಸಚಿವರು ಮಾತನಾಡಬೇಕು. ಹಣವಿಲ್ಲದೇ ವರ್ಗಾವಣೆ ಎಂದರೆ ಅದು ಶಿಕ್ಷೆ. ಈ ಬಗ್ಗೆಯೂ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಲಿ ಎಂದು ಮಾಜಿ ಪೊಲೀಸ್ ಅಧಿಕಾರಿ, ಬಿಜೆಪಿ ಮುಖಂಡ ಗಿರಿಶ್ ಮಟ್ಟೆಣ್ಣನವರ್ ಸುದ್ದಿ ಸಂಸ್ಥೆಗಳಿಗೆ ತನ್ನ ಅಭಿಪ್ರಾಯ ತಿಳಿಸಿದ್ದಾರೆ. ಇದು ಪೊಲೀಸ್ ಇಲಾಖೆಯಲ್ಲಿ ಆಂತರಿಕವಾಗಿ ಹೇಳಿ ಬರುತ್ತಿರುವ ಮಾತುಗಳು.
ಇದರ ನಡುವೆ ಪೊಲೀಸರ ಮಾಮೂಲಿ ವಸೂಲಿ, ಸಂಚಾರ ನಿಯಮಗಳ ಹೆಸರಿನಲ್ಲಿ ವಸೂಲಿ ಬಗ್ಗೆಯೂ ಸಾರ್ವಜನಿಕರು ಗೃಹ ಸಚಿವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಗೃಹ ಸಚಿವರ ಹೇಳಿಕೆ ಬಗ್ಗೆ ಒನ್‌ಇಂಡಿಯಾ ಕನ್ನಡ ಕೇಳಿದ್ದ ಸಾರ್ವಜನಿಕ ಅಭಿಪ್ರಾಯಕ್ಕೆ ಪೊಲೀಸರ ವಿರುದ್ಧ ಸಾರ್ವಜನಿಕರು ಕಿಡಿ ಕಾರಿದ್ದಾರೆ. ಗೃಹ ಸಚಿವರ ಹೇಳಿಕೆಯನ್ನು ಸಮರ್ಥನೆ ಮಾಡಿದ್ದಾರೆ. ಪೊಲೀಸರ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರು ಧ್ವನಿಗೂಡಿಸಿದ್ದಾರೆ. ಗೃಹ ಸಚಿವರ ಹೇಳಿಕೆ ಇದೀಗ ಪೊಲೀಸ್ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಸಮಾಜದಲ್ಲಿ ದೊಟ್ಟ ಮಟ್ಟದ ಚರ್ಚೆ ಹುಟ್ಟು ಹಾಕಿದೆ.
"ಪೊಲೀಸರು ಕೆಟ್ಟು ಹಾಳಾಗಿ ಹೋಗಿದ್ದಾರೆ. ಪೊಲೀಸರು ಲಂಚ ತಗೊಂಡು ಬಿದ್ದಿರುತ್ತಾರೆ ನಾಯಿ ಹಾಗೆ! ನಿಮ್ಮ ಪೊಲೀಸರಿಗೆ ಆತ್ಮ ಗೌರವ ಬೇಕು ಅಲ್ಲ ರೀ? ಒಬ್ಬ ಗೃಹ ಸಚಿವರಾಗಿ ನಾನು ಇರಬೇಕು ಬೇಡವಾ? ಎಂಜಿಲು ಕಾಸು ಪಡೆದು ಅವಕಾಶ ಕೊಡ್ತಾರೆ. ನಿಮ್ಮ ಪೊಲೀಸರಿಗೆ ಆತ್ಮ ಗೌರವ ಬೇಕು ಅಲ್ಲರೀ? ಕೊಡುವ ಸಂಬಳ ಕಡಿಮೆ ಇದೆಯಾ? ಕೈ ತುಂಬಾ ಬರುವ ಸಂಬಳ ಇಲಾಖೆ ಕೊಡ್ತಿದೆಯಲ್ಲಾ ಎಂಬ ಹೇಳಿಕೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ್ದರು. ಅಕ್ರಮ ಗೋಸಾಣೆ ತಡೆಯದ ಚಿಕ್ಕಮಗಳೂರು ಪೊಲೀಸರ ವಿರುದ್ಧ ಕಿಡಿ ಕಾರಿದ್ದರು. ಇದು ದೊಡ್ಡ ವಿವಾದವನ್ನೇ ಹುಟ್ಟು ಹಾಕಿತ್ತು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸ್ ಇಲಾಖೆಯ ಭ್ರಷ್ಟಾಚಾರ ಬಗ್ಗೆ ಆಡಿರುವ ಮಾತುಗಳು ಪೊಲೀಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿವೆ. ಹಸುಗಳ ಕಳ್ಳ ಸಾಗಣಿಕೆ ತಡೆಯದ ಚಿಕ್ಕಮಗಳೂರು ಪೊಲೀಸರ ವರ್ತನೆ ಬಗ್ಗೆ ಕಿಡಿ ಕಾರಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಪೋನ್‌ನಲ್ಲಿ ತಾರಾಟೆಗೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲ, ಪೊಲೀಸರ ಲಂಚಾವತರಾದ ಬಗ್ಗೆ ವಾಮಾಗೋಚರ ಬೈದಿದ್ದರು. ಗೃಹ ಸಚಿವರ ಹತಾಶೆ ಮಾತುಗಳು ಕೇಳಿ ಜನ ಸಾಮಾನ್ಯರು ಕೂಡ ಪೊಲೀಸರ ಬಗ್ಗೆ ಮಾತನಾಡುವಂತಾಗಿದೆ.
ಹಸುಗಳ ಕಳ್ಳ ಸಾಗಣೆ ವಿಚಾರವಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಹಲವು ಜನರ ಸಮ್ಮುಖದಲ್ಲಿಯೇ ಕೆಟ್ಟ ಪದಗಳನ್ನು ಬಳಿಸಿ ಪೊಲೀಸ್ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ತಮ್ಮದೇ ಇಲಾಖೆ ಬಗ್ಗೆ ಗೃಹ ಸಚಿವರು ಆಡಿರುವ ಮಾತುಗಳು ಇದೀಗ ಭಾರಿ ವಿವಾದ ಹುಟ್ಟು ಹಾಕಿವೆ. ಪೊಲೀಸರು ನಾಯಿಗಳ ತರ ಬಿದ್ದಿರ್ತಾರೆ ಎಂದು ಕೊಟ್ಟಿರುವ ವಿವಾದ ಪ್ರಾಮಾಣಿಕ ಪೊಲೀಸರಲ್ಲಿ ಆಕ್ರೋಶ ಹುಟ್ಟು ಹಾಕಿದೆ. ಎಲ್ಲಾ ಪೊಲೀಸರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಿದರೆ ಹೇಗೆ ಎಂಬ ಪಶ್ನೆಗಳು ಎದ್ದಿವೆ.
ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ಆರಗ ಜ್ಞಾನೇಂದ್ರ ಅವರು ಪೊಲೀಸ್ ಇಲಾಖೆ, ಅದರ ಕಾರ್ಯಶೈಲಿ ನೋಡಿ ಪ್ರಶಂಸೆ ಮಾಡಿದ್ದರು. ಪೊಲೀಸರ ಸೇವೆಯನ್ನು ಹಾಡಿ ಹೊಗಳಿದ್ದರು. ಪೊಲೀಸರ ಬಗ್ಗೆ ಅಪಾರ ಗೌರವದ ಮಾತುಗಳನ್ನಾಡಿದ್ದರು. ಇದೀಗ ಚಿಕ್ಕಮಗಳೂರಿನಲ್ಲಿ ಹಸುಗಳ ಕಳ್ಳ ಸಾಗಣೆ ವಿಚಾರಕ್ಕೆ ಸಂಬಂಧಿಸಿದಂತೆ ಆಡಿರುವ ಮಾತುಗಳು ವಿವಾದಕ್ಕೆ ನಾಂದಿ ಹಾಡಿವೆ. ನಾಯಿ ಪದ ಬಳಕೆ ಮಾಡಿರುವ ಗೃಹ ಸಚಿವರ ಬಗ್ಗೆ ಪೊಲೀಸ್ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ. ಗೃಹ ಸಚಿವರ ಈ ಹೇಳಿಕೆ ಬಗ್ಗೆ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು ಯಾರೂ ಬಾಯಿ ಬಿಟ್ಟಿಲ್ಲ.
ಶಿವಮೊಗ್ಗದಲ್ಲಿ ಗೃಹ ಸಚಿವರ ವಿರುದ್ಧ ಪ್ರತಿಭಟನೆ: ಹಸುಗಳ ಕಳ್ಳ ಸಾಗಣೆ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತನ ವಿರುದ್ಧ ಬಿಜೆಪಿ ಕಾರ್ಯಕರ್ತರೇ ದಾಳಿ ಮಾಡಿದ ಪ್ರಕರಣ ತೀರ್ಥಹಳ್ಳಿಯಲ್ಲಿ ಹೊಸ ಸ್ವರೂಪ ಪಡೆದುಕೊಂಡಿದೆ. ಅಕ್ರಮ ಗೋ ಸಾಗಣೆ ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು, ವಿಶ್ವ ಹಿಂದೂ ಪರಿಷತ್, ಬಿಜೆಪಿ ಯುವ ಮೋರ್ಚಾ ಕಾರ್ಯರ್ತರೇ ರೋಡಿಗೆ ಇಳಿದಿದ್ದಾರೆ. ಪೊಲೀಸ್ ಇಲಾಖೆ ಬೀಟ್ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿದೆ. ಅಕ್ರಮ ಗೋಸಾಣೆ ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಪಕ್ಷದ ಕಾರ್ಯಕರ್ತರೇ ಪ್ರತಿಭಟನೆ ಮಾಡಿದ್ದಾರೆ.
ಇತ್ತೀಚೆಗೆ ತೀರ್ಥಹಳ್ಳಿ ಮಾಳೂರು ಕಡೆಯಿಂದ ಬೆಜ್ಜುವಳ್ಳಿ ಕಡೆ ಗೂಡ್ಸ್ ವಾಹನದಲ್ಲಿ ಹಸು ಮತ್ತು ಎಮ್ಮೆ ಅಕ್ರಮ ಸಾಗಣೆ ಮಾಡುತ್ತಿದ್ದ ವಾಹನವನ್ನು ಇಬ್ಬರು ಬೈಕ್‌ನಲ್ಲಿ ಹಿಂಬಾಲಿಸಿದ್ದರು. ವಾಹನ ಹಿಂಬಾಲಿಸಿದವರ ಮೇಲೆ ವಾಹನ ಹತ್ನಿಸುವ ಪ್ರಯತ್ನ ನಡೆದಿದ್ದು, ವಾಹನ ಹತ್ತಿಸಲು ಯತ್ನಿಸಿದ್ದು ಕೂಡ ಬಿಜೆಪಿ ಕಾರ್ಯಕರ್ತ ಎಂದು ಘಟನೆ ಬಳಿಕ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಸೇರಿದಂತೆ ಹಲವು ಕಸಾಯಿ ಖಾನೆಗಳ ಮೇಲೆ ಭಜರಂಗದಳದ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಈ ಸಂಬಂಧ ಆರು ಮಂದಿಯ ವಿರುದ್ಧ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಾಗಿವೆ ಗೃಹ ಸಚಿವರ ತವರು ಕ್ಷೇತ್ರದಲ್ಲಿಯೇ ಪೊಲೀಸ್ ಇಲಾಖೆಯ ವೈಫಲ್ಯ ಖಂಡಿಸಿ ಹಿಂದೂಪರ ಸಂಘಟನೆಗಳು ಹೋರಾಟಕ್ಕೆ ಇಳಿದಿವೆ. ಗೃಹ ಸಚಿವರ ಕ್ಷೇತ್ರದಲ್ಲಿ ಪರಿಸ್ಥಿತಿ ಹೀಗಾದರೆ ಇನ್ನ ರಾಜ್ಯದ ಪರಿಸ್ಥಿತಿ ಏನು ಎಂಬ ಪ್ರಶ್ನೆ ಸಾರ್ವಜನಿಕರು ಮುಂದಿಟ್ಟಿದ್ದಾರೆ.