ನಿಫಾ ವೈರಸ್ ಭೀತಿ: 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ ' - ಸಿಎಂ ಬೊಮ್ಮಾಯಿ

ಬೆಂಗಳೂರು, ಸೆ. 07 : ಕೇರಳದಲ್ಲಿ ನಿಫಾ ವೈರಸ್ ಭೀತಿ ಹೆಚ್ಚುತ್ತಿದ್ದು, ನಿಫಾ ವೈರಸ್ ತಡೆಗೆ ರಾಜ್ಯದಲ್ಲೂ ಅಗತ್ಯವಾದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇರಳ ರಾಜ್ಯದಲ್ಲಿ ಆತಂಕ ಹೆಚ್ಚಿಸಿರುವ ನಿಫಾ ವೈರಸ್ ತಡೆಗೆ ರಾಜ್ಯದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ನಿಯಂತ್ರಣದ ಜೊತೆ ನಿಫಾ ವೈರಸ್ ಬಗ್ಗೆಯೂ ನಿಗಾ ಇಡಲಾಗಿದೆ. ಸದ್ಯ, ಕೇರಳದಿಂದ ಬರುತ್ತಿರುವವರನ್ನು ತಪಾಸಣೆ ಮಾಡಲಾಗುತ್ತಿದೆ. ಮುಂಬರು ದಿನಗಳಲ್ಲಿ ಮತ್ತಷ್ಟು ಬಿಗಿಕ್ರಮ ತೆಗೆದುಕೊಳ್ಳಲಾಗುವುದು. ತಜ್ಞರ ವರದಿ ಕೈಸೇರಿದ ನಂತರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ.
ಗಡಿ ಭಾಗದಿಂದ ಸಾಕಷ್ಟು ಜನರು ಆರೋಗ್ಯ ಹಾಗೂ ಶಿಕ್ಷಣ ಸಂಬಂಧಿಸಿದಂತೆ ಮಂಗಳೂರಿನ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಬರುತ್ತಿರುವುದರಿಂದ ಜಿಲ್ಲೆಯಲ್ಲಿ ನಿಫಾ ಅಲರ್ಟ್ ಘೋಷಿಸಲಾಗಿದ್ದು , ಸಂಬಂಧಪಟ್ಟವರು ಕೂಡಲೇ ಮುಂಜಾಗ್ರತ ಕ್ರಮ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಕೇರಳದಲ್ಲಿ ಸದ್ಯ ಇಬ್ಬರು ಆರೋಗ್ಯ ಸಿಬ್ಬಂದಿಗೆ ನಿಫಾ ಹರಡಿರುವ ಮಾಹಿತಿ ಸಿಕ್ಕಿದೆ.