ಬ್ಯಾಡಗಿ 'ಚಿನ್ನ'; ಮೆಣಸಿನಕಾಯಿಗೀಗ ಬಂಗಾರದ ಬೆಲೆ

ಬ್ಯಾಡಗಿ 'ಚಿನ್ನ'; ಮೆಣಸಿನಕಾಯಿಗೀಗ ಬಂಗಾರದ ಬೆಲೆ

ಕೇಶವಮೂರ್ತಿ ವಿ.ಬಿ. ಹಾವೇರಿ/ ವೀರೇಶ ಚೌಕಿಮಠ ಬ್ಯಾಡಗಿ

ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿಗೆ ಈಗ ಚಿನ್ನದ ಬೆಲೆ ಬಂದಿದೆ. ಪ್ರತಿ ಕ್ವಿಂಟಾಲ್ ಬ್ಯಾಡಗಿ ಕಡ್ಡಿ (ಕೆಡಿಎಲ್) ಮತ್ತು ಡಬ್ಬಿ ತಳಿಗೆ 60ರಿಂದ 65 ಸಾವಿರ ರೂ.ಗೆ ಏರಿಕೆಯಾಗಿದೆ.

ಆದರೆ, ಅತಿವೃಷ್ಟಿ ಮತ್ತು ಅಕಾಲಿಕ ಮಳೆಯಿಂದಾಗಿ ಮೆಣಸಿನಕಾಯಿ ಇಳುವರಿ ಕಡಿಮೆಯಾಗುತ್ತಿದ್ದು, ಇದರ ಪರಿಣಾಮ ವಾರದಿಂದ ವಾರಕ್ಕೆ ದರ ಏರುತ್ತಲೇ ಇದೆ. ಈ ಬೆಳವಣಿಗೆಯಿಂದ ಗ್ರಾಹಕರು ಸೇರಿ ರೈತರಲ್ಲೂ ಆತಂಕ ಸೃಷ್ಟಿಯಾಗಿದೆ.

ವಿಶ್ವದಲ್ಲೇ ಮೆಣಸಿನಕಾಯಿ ಮಾರುಕಟ್ಟೆಗೆ ಹೆಸರುವಾಸಿಯಾಗಿರುವ ಬ್ಯಾಡಗಿಯಲ್ಲಿ ಪ್ರತಿ ಸೋಮವಾರ ಮತ್ತು ಗುರುವಾರ ಇ-ಟೆಂಡರ್ ಮೂಲಕ ಮೆಣಸಿನಕಾಯಿ ಖರೀದಿ ಪ್ರಕ್ರಿಯೆ ನಡೆಯುತ್ತದೆ. ಫೆಬ್ರವರಿ, ಮಾರ್ಚ್​ನಲ್ಲಿ ಒಂದು ದಿನಕ್ಕೆ ಕನಿಷ್ಠ 2ರಿಂದ 3 ಲಕ್ಷ ಚೀಲ ಆವಕ ಆಗುತ್ತಿತ್ತು. ಆದರೆ, ಈಗ 70ರಿಂದ 80 ಸಾವಿರ ಚೀಲಕ್ಕೆ ಕುಸಿಯುತ್ತಿದೆ. ಈ ಬಾರಿ ಮಾ. 16ರಂದು 1.35 ಲಕ್ಷ ಚೀಲ (ಒಂದು ಚೀಲದಲ್ಲಿ 30 ಕೆಜಿ) ಆವಕವಾಗಿದ್ದೇ ದೊಡ್ಡ ಖರೀದಿಯಾಗಿದೆ. ಅದರಲ್ಲೂ 15ರಿಂದ 20 ಸಾವಿರ ಚೀಲ ಮಾತ್ರ ಬ್ಯಾಡಗಿ ಕಡ್ಡಿ (ಕೆಡಿಎಲ್) ಮತ್ತು ಡಬ್ಬಿ ತಳಿ ಇದ್ದು, ಉಳಿದದ್ದೆಲ್ಲ ಹೈಬ್ರಿಡ್ ತಳಿ ಮೆಣಸಿನಕಾಯಿ ಇತ್ತು.

ಬಹುತೇಕ ಮಸಾಲಾ, ಖಾರದ ಪುಡಿ ತಯಾರಿಕೆ ಕಂಪನಿಯವರು ಬ್ಯಾಡಗಿ ಡಬ್ಬಿ ಮತ್ತು ಕಡ್ಡಿ ಮೆಣಸಿನಕಾಯಿಯನ್ನೇ ಖರೀದಿಸುತ್ತಾರೆ. ಹೀಗಾಗಿ, ಬ್ಯಾಡಗಿ ತಳಿಗೆ ಹೆಚ್ಚು ಬೇಡಿಕೆ ಇದೆ. ಇತ್ತೀಚೆಗೆ ಮೆಣಸಿನಕಾಯಿ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಸೆಪ್ಟೆಂಬರ್​ನಲ್ಲಿ ಮಳೆ ಹೆಚ್ಚಾಗಿದ್ದರಿಂದ ರೈತರಿಗೆ ನಷ್ಟ ಉಂಟಾಯಿತು.

ಬ್ಯಾಡಗಿ ಮಾರುಕಟ್ಟೆ ಪಾರದರ್ಶಕ ಇ-ಟೆಂಡರ್ ಮಾರಾಟ ವ್ಯವಸ್ಥೆ ಹೊಂದಿದೆ. ಪ್ರತಿಯೊಂದು ಅಂಗಡಿಗೆ ಒಂದು ಕೋಡ್ ನೀಡಲಾಗುತ್ತದೆ. ಆ ಕೋಡ್ ಮೂಲಕ ತಳಿ ಹೆಸರು, ತೇವಾಂಶ, ಬಣ್ಣ, ಗುಣಮಟ್ಟ ಪರಿಶೀಲಿಸಿ ಕಂಪ್ಯೂಟರ್​ನಲ್ಲಿ ದಾಖಲಿಸಲಾಗುತ್ತದೆ. ಒಬ್ಬರಿಂದ ಒಬ್ಬರಿಗೆ ದರ ಗೊತ್ತಾಗುವುದಿಲ್ಲ. ಘೊಷಣೆಯಾದ ನಂತರವೇ ದರ ಗೊತ್ತಾಗುತ್ತದೆ. ಹಾಗಾಗಿ, ಇಲ್ಲಿಗೆ ದೂರದ ಹೊಸಪೇಟೆ, ಬಳ್ಳಾರಿ, ರಾಯಚೂರು, ಆದೋನಿ, ಮಂತ್ರಾಲಯ, ಎಮ್ಮಿಗನೂರ, ಆಂಧ್ರಪ್ರದೇಶದ ಮೆಹಬೂಬ ನಗರ, ಕರೀಂನಗರ, ಕರ್ನಲ್, ಮತ್ತಿತರ ಭಾಗದಿಂದ ಮಾರಾಟಕ್ಕೆ ಬರುತ್ತಾರೆ.

2000ನೇ ಇಸವಿಗೂ ಮೊದಲು ಬ್ಯಾಡಗಿ ಡಬ್ಬಿ, ಕಡ್ಡಿ ತಳಿ ಮಾತ್ರ ಬರುತ್ತಿತ್ತು. 2010ರಿಂದ ಈಚೆಗೆ ಹೈಬ್ರೀಡ್ ತಳಿಗಳಾದ ಸನಂ ಫೋರ್(ಎಸ್4), ಸೂಪರ್ 10 (ಎಸ್10), ಸಿಂಜೆಂಟಾ 5531, ಸಿಂಜೆಂಟಾ 2043, ಬ್ಯಾಡಗಿ ಡಬ್ಬಿ ಮಾದರಿಯ ಸರ್ಪಣ್ 102, ಸೇರಿ ಎಲ್ಲ ವಿಧದ ತಳಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಬ್ಯಾಡಗಿ ಕಡ್ಡಿ (ಕೆಡಿಎಲ್) ಹಾಗೂ ಡಬ್ಬಿ ತಳಿ ಅಣ್ಣಿಗೇರಿ, ಕುಂದಗೋಳ, ಹುಬ್ಬಳ್ಳಿ, ಸಂಶಿ, ಗುಡಗೇರಿ, ಧಾರವಾಡ ತಾಲೂಕು ಸುತ್ತಮುತ್ತ ಸಹಸ್ರಾರು ರೈತರು ಬೆಳೆಯುತ್ತಿದ್ದರು. ಅಕಾಲಿಕ ಮಳೆಯಿಂದಾಗಿ ನಷ್ಟ ಹೊಂದಲಾರಂಭಿಸಿದರು. ಹಾಗಾಗಿ, ಈಗ ಈ ಭಾಗದಲ್ಲಿ ಮೆಣಸಿನಕಾಯಿ ಬೆಳೆಗಾರರ ಸಂಖ್ಯೆ ತುಂಬ ಕಡಿಮೆಯಾಗಿದೆ ಎನ್ನುತ್ತಾರೆ ತಜ್ಞರು.

ಅತ್ಯಂತ ಹೆಚ್ಚು ಕೆಂಪು ಬಣ್ಣ ಹೊಂದಿರುವ ಬ್ಯಾಡಗಿ ಮೆಣಸಿನಕಾಯಿ ತಳಿ ಗುಣಮಟ್ಟ ಮತ್ತು ರುಚಿಗೆ ಹೆಸರುವಾಸಿಯಾಗಿದೆ. ಹಾಗಾಗಿ, ಜನರಿಗೆ ಮತ್ತು ಮಸಾಲಾ ಪದಾರ್ಥ ತಯಾರಿಕಾ ಕಂಪನಿಗಳಿಗೆ ಇದು ಅಚ್ಚುಮೆಚ್ಚು. ಈ ತಳಿಯಿಂದ ಸೌಂದರ್ಯ ವರ್ದಕ ತಯಾರಿಸುವ ಓಲಿಯೋ ರೀಸನ್ ಕೆಮಿಕಲ್ ತಯಾರಿ ಸಲಾಗುತ್ತದೆ. ಇದಲ್ಲದೇ ಈ ಕಾಯಿಯ ಬೀಜ ದಿಂದ ಖಾರದ ಎಣ್ಣೆ ತಯಾರಿಸಲಾಗುತ್ತದೆ. ಗುಂಟೂರು ಸೇರಿ ಇತರ ತಳಿಯ ಮೆಣಸಿನ ಕಾಯಿಗಿಂತ ಬ್ಯಾಡಗಿ ಕಡ್ಡಿ, ಡಬ್ಬಿ ಮೆಣಸಿನಕಾಯಿ ತಳಿ ಶ್ರೇಷ್ಠ ತಳಿ ಎಂದು ಹೆಸರು ಪಡೆದಿದೆ.

ಈ ಬಾರಿಯಾದರೂ ಹೆಚ್ಚು ಮೆಣಸಿನಕಾಯಿ ಆವಕವಾಗುವ ಮತ್ತು ದರ ಇಳಿಕೆಯ ನಿರೀಕ್ಷೆಯಲ್ಲಿ ವರ್ತಕರಿದ್ದರು. ಆದರೆ, ಆಂಧ್ರ- ಕರ್ನಾಟಕ ಗಡಿಯಲ್ಲಿ ವಾರಂಗಲ್, ಕಮ್ಮಂ ಭಾಗದಲ್ಲಿ ಮೊನ್ನೆ ದೊಡ್ಡ ಪ್ರಮಾಣದ ಮಳೆ ಆಗಿದ್ದರಿಂದ ಮತ್ತೆ ಬೆಳೆ ನಷ್ಟ ಉಂಟಾಗಿದೆ. ಹೀಗಾಗಿ, ಮತ್ತೆ ಮೆಣಸಿನಕಾಯಿ ದರ ಇಳಿಕೆ ಸಂಭವ ಕಡಿಮೆಯಾಗಿದೆ. ರೈತರಿಗೂ ನಷ್ಟ, ಗ್ರಾಹಕರ ಜೇಬಿಗೂ ಮತ್ತಷ್ಟು ಹೊರೆಯಾಗುವ ಸಾದ್ಯತೆ ದಟ್ಟವಾಗಿದೆ.

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ 2020ರಲ್ಲಿ 1,700 ಕೋಟಿ ರೂ. ವಹಿವಾಟು ನಡೆದಿತ್ತು. 2021ರಲ್ಲಿ 1,800 ಕೋಟಿ ರೂ. ಹಾಗೂ 2022ರಲ್ಲಿ 2 ಸಾವಿರ ಕೋಟಿ ರೂ. ವ್ಯವಹಾರ ನಡೆದಿದೆ. ಈ ವರ್ಷ 2 ಸಾವಿರ ಕೋಟಿ ರೂ. ದಾಟುವ ನಿರೀಕ್ಷೆ ಇದೆ ಎನ್ನುತ್ತಾರೆ ವರ್ತಕರು.

ಬ್ಯಾಡಗಿ ಮೆಣಸಿನಕಾಯಿಗೆ ವಿದೇಶದಲ್ಲೂ ಎಲ್ಲಿಲ್ಲದ ಬೇಡಿಕೆ ಇದೆ. ಅಮೆರಿಕ, ರಷ್ಯಾ, ಮಲೇಷಿಯಾ, ಇಂಡೋನೇಷ್ಯಾ, ಬಾಲಿ ಜಕಾರ್ತ, ಐಲ್ಯಾಂಡ್, ಸಿಂಗಾಪುರ, ಶ್ರೀಲಂಕಾ, ಅರಬ್, ಯೂರೋಪ್ ದೇಶಗಳಿಗೂ ಈ ತಳಿ ರವಾನೆಯಾಗುತ್ತದೆ.

ಬಹುತೇಕ ಹಲವು ಮಸಾಲಾ ಕಂಪನಿಗಳು ಬ್ಯಾಡಗಿಯಿಂದ ಮೆಣಸಿನಕಾಯಿ ಖರೀದಿಸುತ್ತವೆ. ಡಬ್ಬಿ, ಕಡ್ಡಿ ಸೇರಿ ಎಲ್ಲ ವೆರೈಟಿ ಖರೀದಿಸುತ್ತಾರೆ. ಕಳೆದ ವರ್ಷ ಡಿಸೆಂಬರ್​ನಿಂದ ಈವರ್ಷ ಫೆ. 15ರವರೆಗೆ ಬ್ಯಾಡಗಿ ಕಡ್ಡಿ ಮೆಣಸಿನಕಾಯಿ 30ರಿಂದ 40 ಸಾವಿರ ರೂ. ಇತ್ತು. ಡಬ್ಬಿ ತಳಿ 35ರಿಂದ 42 ಸಾವಿರ ರೂ. ಇತ್ತು. ಫೆಬ್ರವರಿ ನಂತರ 62ರಿಂದ 65 ಸಾವಿರ ರೂ.ವರೆಗೆ ತಲುಪಿದೆ.

ಪ್ರತಿ ವರ್ಷ ಫೆಬ್ರವರಿ, ಮಾರ್ಚ್​ನಲ್ಲಿ ಬೆಳೆ ಕಟಾವಿಗೆ ಬರುವ ಕಾರಣ ಹೆಚ್ಚು ಆವಕವಾಗಿ, ದರ ಕಡಿಮೆಯಾಗುತ್ತಿತ್ತು. ಎಲ್ಲರೂ ಸ್ಟಾಕ್ ಮಾಡುತ್ತಿದ್ದರು. ಆದರೆ, ಅತಿವೃಷ್ಟಿಯಿಂದಾಗಿ ಈಗ ಉಲ್ಟಾ ಆಗಿದೆ. ದರ ದುಪ್ಪಟ್ಟಾಗಿದೆ. ಮತ್ತಷ್ಟು ಬೆಲೆ ಏರುವ ಸಂಭವವಿದೆ.

| ರಾಜು ಮೋರಿಗೇರಿ, ಗೌರವ ಕಾರ್ಯದರ್ಶಿ, ಮೆಣಸಿನಕಾಯಿ ವರ್ತಕರ ಸಂಘ, ಬ್ಯಾಡಗಿ

ಕಪ್ಪು ನುಸಿ (ಬ್ಲಾಕ್ ಟ್ರಿಪ್ಸ್) ರೋಗದ ಕಾಟದಿಂದ ಬ್ಯಾಡಗಿ ಕಡ್ಡಿ, ಡಬ್ಬಿ ಮೆಣಸಿನಕಾಯಿ ಬೆಳೆಯ ಇಳುವರಿ ಕಡಿಮೆಯಾಗಿದೆ. ಹಿಂದೆ ಎಕರೆಗೆ 10ರಿಂದ 15 ಕ್ವಿಂಟಾಲ್ ಬೆಳೆಯುತ್ತಿದ್ದ ತಳಿ ಈಗ 4ರಿಂದ 5 ಕ್ವಿಂಟಾಲ್​ಗೆ ಇಳಿದಿದೆ. ಈ ಸಮಸ್ಯೆಗೆ ಸರ್ಕಾರಗಳು ಪರಿಹಾರ ಹುಡುಕಬೇಕು. ರೈತರಿಗೆ ನೆರವಾಗಬೇಕು.

| ಶಿವರಾಮಪ್ಪ ರೈತ, ಕರ್ನಲ್ (ಆಂಧ್ರಪ್ರದೇ