ಹಳಿಗಳ ಮೇಲೆ ಜಾನುವಾರು: 10 ತಿಂಗಳಲ್ಲಿ 4 ಸಾವಿರ ರೈಲು ವಿಳಂಬ

ನವದೆಹಲಿ: ರೈಲು ಹಳಿಗಳ ಮೇಲೆ ಜಾನುವಾರುಗಳು ಇದ್ದ ಕಾರಣ, ಅಕ್ಟೋಬರ್ ತಿಂಗಳ ಮೊದಲ 9 ದಿನಗಳಲ್ಲಿ 200 ರೈಲುಗಳು ವಿಳಂಬವಾಗಿದ್ದು, ವರ್ಷದ ಹತ್ತು ತಿಂಗಳಲ್ಲಿ ಸುಮಾರು 4 ಸಾವಿರ ರೈಲುಗಳು ವಿಳಂಬವಾಗಿ ಸಂಚರಿಸಿವೆ ಎಂದು ರೈಲ್ವೆ ಇಲಾಖೆಯ ಅಧಿಕೃತ ಅಂಕಿ- ಅಂಶಗಳು ತಿಳಿಸಿವೆ.
ಅಕ್ಟೋಬರ್ 1ರಂದು ಉದ್ಘಾಟನೆಗೊಂಡ ಮುಂಬೈ-ಅಹಮದಾಬಾದ್ ಮಾರ್ಗದ ವಂದೇ ಭಾರತ ಎಕ್ಸ್‌ಪ್ರೆಸ್ ರೈಲು ಈ ತಿಂಗಳೊಂದರಲ್ಲೇ ಮೂರು ಬಾರಿ ಜಾನುವಾರುಗಳು ಅಡ್ಡ ಬಂದ ಕಾರಣ ವಿಳಂಬವಾಗಿ ಚಲಿಸಿವೆ. ಅಷ್ಟೇ ಅಲ್ಲ ರೈಲಿನ ಮುಂಭಾಗಕ್ಕೆ ಹಾನಿಯೂ ಆಗಿದೆ.
ಈ ರೀತಿಯ ಪ್ರಕರಣಗಳು ಹೆಚ್ಚು ದಾಖಲಾಗಿರುವ ಪ್ರದೇಶಗಳನ್ನು ರೈಲ್ವೆ ಇಲಾಖೆಯು ಗುರುತಿಸಿದ್ದು, ಅಲ್ಲಿ ಬೇಲಿ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ ಶೇ 40ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ರೈಲು ಹಳಿಗಳ ಮೇಲೆ ಜಾನುವಾರುಗಳು ಅಡ್ಡಬಂದ ಕಾರಣ ಈ ವರ್ಷದ ಜನವರಿಯಲ್ಲಿ 360, ಸೆಪ್ಟೆಂಬರ್‌ನಲ್ಲಿ 635 ರೈಲುಗಳು ವಿಳಂಬವಾಗಿ ಚಲಿಸಿವೆ. ಪ್ರತಿದಿನವೂ 22ಕ್ಕೂ ಹೆಚ್ಚು ರೈಲುಗಳು ವಿಳಂಬವಾಗಿವೆ. ವರ್ಷದ ಹತ್ತು ತಿಂಗಳಲ್ಲಿ ಒಟ್ಟು 4,433 ರೈಲುಗಳು ವಿಳಂಬವಾಗಿವೆ ಎಂದು ಅಂಕಿ- ಅಂಶಗಳು ತಿಳಿಸಿವೆ.