ರಾಹುಲ್ ಗಾಂಧಿ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು
ಬೆಂಗಳೂರು: ಭಾರತ ಜೋಡೋ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಮೂವರ ವಿರುದ್ಧ ಹಕ್ಕು ಸ್ವಾಮ್ಯ ಮತ್ತು ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆ ಆರೋಪದಡಿ ಯಶವಂತಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಯಶವಂತಪುರದಲ್ಲಿ ಇರುವ ಎಂಆರ್‌ಟಿಸಿ ಮ್ಯೂಸಿಕ್‌ನ ಎಂ. ನವೀನ್ ಕುಮಾರ್, ಈ ಸಂಬಂಧ ದೂರು ನೀಡಿದ್ದಾರೆ.
ಎಂಆರ್‌ಟಿಸಿ ಮ್ಯೂಸಿಕ್ ಕಂಪನಿ, ತನ್ನ ದೂರಿನಲ್ಲಿ 'ಕೆಜಿಎಫ್ ಸಿನಿಮಾದ ಹಿಂದಿ, ಕನ್ನಡ ಸೇರಿದಂತೆ ವಿವಿಧ ಭಾಷೆಗಳ ವಿಡಿಯೋ ಮತ್ತು ಮ್ಯೂಸಿಕ್ ಹಕ್ಕುಗಳನ್ನು ಹೊಂದಿದೆ. ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಸುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ ನಮ್ಮ ಅನುಮತಿ ಪಡಿಯದೇ ಕೆಜಿಎಫ್ ಸಿನಿಮಾ ಮ್ಯೂಸಿಕ್ ಬಳಸಿಕೊಂಡಿದ್ದಾರೆ.
ಈ ಮುಖಾಂತರ ಕಾಂಗ್ರೆಸ್ ತಮ್ಮ ಸ್ವಂತ ರಾಜಕೀಯ ಕಾರ್ಯಸೂಚಿಯನ್ನು ಮುಂದುವರಿಸಲು, ಮಾರ್ಕೆಟಿಂಗ್ ಮತ್ತು ಪ್ರಚಾರಕ್ಕೆ ನಮ್ಮ ಹಕ್ಕು ಸ್ವಾಮ್ಯ, ಬೌದ್ಧಿಕ ಆಸ್ತಿ ಹಕ್ಕನ್ನು ಉಲ್ಲಂಘಿಸಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ' ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರು ಆಧರಿಸಿ ಯಶವಂತಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.