ICU ಬೆಡ್ ಮೇಲೆ ಮಲಗಿಕೊಂಡೇ ಸಬ್ರಿಜಿಸ್ಟ್ರಾರ್ ಕಚೇರಿಗೆ ಬಂದು ಆಸ್ತಿ ಪತ್ರಕ್ಕೆ ಸಹಿ ಹಾಕಿದ ವೃದ್ಧೆ!

ಬೆಳಗಾವಿ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯೊಬ್ಬರು ಐಸಿಯು ಬೆಡ್ ಮೇಲೆ ಮಲಗಿಕೊಂಡೇ ಉಪನೋಂದಣಿ ಕಚೇರಿಗೆ ಆಗಮಿಸಿ ಆಸ್ತಿ ವರ್ಗಾವಣೆ ಪತ್ರಗಳಿಗೆ ಸಹಿ ಹಾಕಿದ ಘಟನೆ ಬೆಳಗಾವಿ ದಕ್ಷಿಣ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದಿದೆ.ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಹಾದೇವಿ ಅಗಸಿಮನಿ(80) ನ್ಯೂಮೋನಿಯಾ ಕಾಯಿಲೆಗೆ ಚಿಕಿತ್ಸೆ
ಪಡೆಯುತ್ತಿದ್ದರು. ಆಸ್ತಿ ವರ್ಗಾವಣೆ ಮತ್ತು ಆಸ್ತಿ ಹಕ್ಕು ಪತ್ರಕ್ಕೆ ಮಹಾದೇವಿ ಅಗಸಿಮನಿ ಅವರ ಬಳಿ ಸಹಿ ಮತ್ತು ಬೆರಳಚ್ಚು ತೆಗೆದುಕೊಂಡು ಹೋಗಲು ಕುಟುಂಬ ಸದಸ್ಯರು ಉಪನೋಂದಾಣಾಧಿಕಾರಿ ಕಚೇರಿ ಸಿಬ್ಬಂದಿಗೆ ವಿನಂತಿಸಿದ್ದರು. ಆದರೆ, ಕಚೇರಿ ಸಿಬ್ಬಂದಿಯು ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರು. ಹಾಗಾಗಿ ಕುಟುಂಬ ಸದಸ್ಯರು ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯನ್ನು ಬೆಡ್ ಮೇಲೆಯೇ ಉಪನೋಂದಣಿ ಕಚೇರಿಗೆ ಕರೆದುಕೊಂಡು ಬಂದು ಸಹಿ ಹಾಕಿಸಿದ್ದಾರೆ.
ಉಪನೋಂದಣಿ ನಿಯಮ ಪ್ರಕಾರ ಆಸ್ಪತ್ರೆ ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿರುವವರು ಉಪನೋಂದಣಿ ಕಚೇರಿಗೆ ಬರಲು ಸಾಧ್ಯವಾಗದಿರುವ ಸಂದರ್ಭದಲ್ಲಿ ಸಂಬಂಧಿಸಿದವರು ಮುಂಗಡವಾಗಿ ಉಪನೋಂದಣಿ ಕಚೇರಿಗೆ ಅರ್ಜಿ ಸಲ್ಲಿಸಿ ಶುಲ್ಕ ಕಟ್ಟಬೇಕು. ಬಳಿಕ ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ಉಪನೋಂದಣಿ ಕಚೇರಿ ಸಿಬ್ಬಂದಿ ಅಥವಾ ಅಧಿಕಾರಿಯೊಬ್ಬರು ನೇರವಾಗಿ ಆಸ್ಪತ್ರೆಗೆ ಹೋಗಿ ದಾಖಲೆಗಳಿಗೆ ಸಹಿ ಹಾಕಿಸಿಕೊಂಡು ಬರುತ್ತಾರೆ. ಆದರೆ, ಈ ಪ್ರಕರಣದಲ್ಲಿ ವೃದ್ಧೆಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುರಿತು ಮಕ್ಕಳು ನೋಂದಣಿ ಕಚೇರಿಗೆ ಅರ್ಜಿ ಸಲ್ಲಿಸಿಲ್ಲ. ಅಲ್ಲದೆ, ವೈದ್ಯರ ಪ್ರಮಾಣಪತ್ರ ಕೂಡ ನೀಡಿಲ್ಲ. ಈ ಕಾರಣ ಮುಂದಿಟ್ಟುಕೊಂಡು ನೋಂದಣಿ ಕಚೇರಿ ಸಿಬ್ಬಂದಿ, ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದಾರೆ. ಇದರಿಂದ ಕುಟುಂಬ ಸದಸ್ಯರು ವೃದ್ಧೆಯನ್ನು ನೋಂದಣಿ ಕಚೇರಿಗೆ ಕರೆದುಕೊಂಡು ಬಂದಿದ್ದಾರೆ.