ಕೇಂದ್ರ ಸರ್ಕಾರ ಯುವ ಸಮೂಹದ ಸಹನೆ ಕೆಣಕುತ್ತಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಕನ್ನಡವನ್ನು ಕೈಬಿಟ್ಟು ನಾಡಿನ ಯುವ ಸಮೂಹದ ಸಹನೆಯನ್ನು ಕೇಂದ್ರ ಸರಕಾರ ತೀವ್ರವಾಗಿ ಕೆಣಕುತ್ತಿದ್ದು ಇದನ್ನು ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಗಾರಿದ್ದಾರೆ. ಈ ಸಂಬಂಧ ಬೆಂಗಳೂರಿನ ಶಿವಾನಂದ ವೃತ್ತದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಗಳ ಸಂಸತ್ತಿನ ಸಮಿತಿಯು ಇತ್ತೀಚಿಗೆ ರಾಷ್ಟ್ರಪತಿಗಳಿಗೆ ನೀಡಿದ 11ನೇ ವರದಿಯಲ್ಲಿ ಎಲ್ಲ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದು ಶಿಫಾರಸ್ಸು ಮಾಡಿದೆ ಎಂದರು.
ಕಲಿಕೆಯಲ್ಲಿ ಮಾತೃಭಾಷೆಗಳಿಗೆ ಆದ್ಯತೆ ನೀಡಿದ ಬಳಿಕ ಉದ್ಯೋಗದ
ಪ್ರಶ್ನೆ ಬಂದಾಗ ಮಾತ್ರ ಹಿಂದಿಯಲ್ಲೇ ಪ್ರವೇಶ ಪರೀಕ್ಷೆ ಬರೆಯಬೇಕು ಎನ್ನುವುದು ಕಪಟತನವಾಗುತ್ತದೆ. ರಾಷ್ಟ್ರಕವಿ ಕುವೆಂಪು ಇದನ್ನೇ ತ್ರಿಭಾಷೆಶೂಲ ಎಂದು ಕರೆದಿದ್ದಾರೆ. ಕೋಟಿ ಕಂಠಗಳಲ್ಲಿ ಕನ್ನಡ ಗೀತೆ ಹಾಡಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,
'ಪ್ರತಿಯೊಬ್ಬ ಕನ್ನಡಿಗನಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸಲಾಗುವುದು' ಎಂದು ನೆನ್ನೆ ದಿನ ಭಾಷಣ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆದರೆ, ವಾಸ್ತವದಲ್ಲಿ ಮಾತ್ರ ಕನ್ನಡಿಗರ ಪಾಲಿನ ಉದ್ಯೋಗವನ್ನು ಕಿತ್ತುಕೊಂಡು ಸಾಮಾಜಿಕವಾಗಿ ಅಭದ್ರತೆ ಸೃಷ್ಟಿಸಿ, ಆರ್ಥಿಕ ಸ್ವಾವಲಂಬನೆಯ ಬೇರುಗಳನ್ನು ಕತ್ತರಿಸುತ್ತಿದೆ. ಡಬಲ್ ಎಂಜಿನ್ ಸರಕಾರಗಳ ಈ ತಂತ್ರ-ಕುತಂತ್ರ ಕೇಂದ್ರ ಮತ್ತು ರಾಜ್ಯಗಳ ನಡುವೆ ಇದ್ದ ಸಹೋದರತ್ವವನ್ನು ಹಂತ ಹಂತವಾಗಿ ಕೊಲ್ಲುತ್ತಾ ಬರುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.