ಹೆಂಡ್ತಿ ಕಾಟಕ್ಕೆ ಬೇಸತ್ತು ಜೈಲೇ ವಾಸಿ ಎಂದು ಬಂಧನಕ್ಕೊಳಗಾಗಲು ಪೊಲೀಸ್ ಚೌಕಿಗೆ ಬೆಂಕಿಯಿಟ್ಟ ಮಹಾಶಯ..!
ಹೆಂಡ್ತಿ ಕಾಟಕ್ಕೆ ಬೇಸತ್ತು ಜೈಲೇ ವಾಸಿ ಎಂದು ಬಂಧನಕ್ಕೊಳಗಾಗಲು ಪೊಲೀಸ್ ಚೌಕಿಗೆ ಬೆಂಕಿಯಿಟ್ಟ ಮಹಾಶಯ..!
ರಾಜಕೋಟ್(ಗುಜರಾತ್: ವಿಚಿತರ ಘಟನೆಯೊಂದರಲ್ಲಿ ಹೆಂಡತಿ ಕಾಟಕ್ಕೆ ಬೇಸತ್ತು ಜೈಲಿನಲ್ಲಿರುವುದೇ ಒಳಿತೆಂದು ಆಲೋಚಿಸಿದ ಯುವಕನೊಬ್ಬ, ಪೊಲೀಸರು ತನ್ನನ್ನು ಬಂಧಿಸಲಿ ಎಂದು ಪೊಲೀಸ್ ಚೌಕಿಗೆಬೆಂಕಿ ಹಚ್ಚಿರುವ ಘಟನೆ ಗುಜರಾತ್ ರಾಜ್‍ಕೋಟ್ ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಚೌಕಿಗೆ ಬೆಂಕಿ ಹಚ್ಚಿದ ಯುವಕನನ್ನುದೇವ್ಜಿ ಚವ್ಡಾ(23) ಎಂದು ಗುರುತಿಸಲಾಗಿದೆ.
ನಿನ್ನೆ (ಭಾನುವಾರ) ಸಂಜೆ 4 ಗಂಟೆ ಸುಮಾರಿಗೆ ಪೊಲೀಸ್ ಚೌಕಿಗೆ ಹೋಗಿ ಬೆಂಕಿ ಹಚ್ಚಿದ್ದಾನೆ. ಇದನ್ನು ಗಮನಿಸಿದ ಕೆಲವು ವ್ಯಾಪಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲಿಸ್ ಸಿಬ್ಬಂದಿ ಠಾಣೆಯಿಂದ ಹೊರಬಂದು ನೋಡಿದಾಗ ಆರೋಪಿ ಅಲ್ಲಿಯೇ ನಿಂತಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹೆಂಡತಿಯಿಂದ ಬೇಸತ್ತಿದ್ದೇನೆ. ಅವಳೊಂದಿಗೆ ಇರುವುದಕ್ಕಿಂತ ಜೈಲಿನಲ್ಲಿರುವುದೇ ವಾಸಿ ಎಂದು ಭಾವಿಸಿದ್ದೇನೆ. ಜೈಲಿನಲ್ಲಿದ್ದರೆ ಕನಿಷ್ಠ ಆಹಾರವಾದರೂ ಸಿಗುತ್ತದೆ ಎಂದು ಈ ಕೃತ್ಯ ಮಾಡಿದ್ದೇನೆ ಎಂದು ತಿಳಿಸಿದ್ದಾನೆ.
ಘಟನೆಯ ಸಮಯದಲ್ಲಿ ಪೊಲೀಸ್ ಚೌಕಿಯನ್ನು ಮುಚ್ಚಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಯಾರಿಗೂ ಗಾಯಗಳಾಗಿಲ್ಲ ಎಂದು ಇನ್ಸ್ಪೆಕ್ಟರ್ ಖುಮಾನ್ಸಿನ್ ವಾಲಾ ಹೇಳಿದ್ದಾರೆ. ನಗರದ ಜಾಮ್‍ನಗರ ರಸ್ತೆಯ ಬಜರಂಗ ವಾಡಿ ಪೊಲೀಸ್ ಚೌಕಿಯ ಎದುರು ವಾಸವಿರುವ ಈತ ಕೂಲಿ ಕೆಲಸ ಮಾಡುತ್ತಿದ್ದು, ನಿತ್ಯ ಮಡದಿಯಜಗಳದಿಂದ ಮನನೊಂದಿದ್ದ ಎನ್ನಲಾಗಿದೆ.
ಇದಕ್ಕಾಗಿ ಜೈಲಿನಲ್ಲಿರುವುದೇ ಒಳಿತು ಎಂದು ಭಾವಿಸಿದ ಈತ ಪೊಲೀಸ್ ಚೌಕಿಗೇ ಬೆಂಕಿ ಇಟ್ಟರೆ ತನ್ನನ್ನು ಪೊಲೀಸರು ಈ ಮೂಲಕವಾದರೂ ಬಂಧಧಿಸುತ್ತಾರೆ ಎಂದು ಭಾವಿಸಿ ಪೊಲೀಸ್ ಚೌಕಿಗೆ ಬೆಂಕಿ ಹಚ್ಚಿದ್ದಾನೆ. ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ವಾಲಾ ತಿಳಿಸಿದ್ದಾರೆ.