ಶಿಗ್ಗಾಂವ ಪಟ್ಟಣಕ್ಕೆ 24×7 ಕುಡಿಯುವ ನೀರಿನ ಯೋಜನೆ -ಸಿಎಂ ಬೊಮ್ಮಾಯಿ
ಹಾವೇರಿ: ಶಿಗ್ಗಾಂವ ಪಟ್ಟಣಕ್ಕೆ 24×7 ಕುಡಿಯುವ ನೀರು ಪೂರೈಕೆ ಯೋಜನೆಗೆ, ಪಟ್ಟಣದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡಲು ಚಿಂತನೆ ಮಾಡಲಾಗುತ್ತಿದೆ ಎಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಶಿಗ್ಗಾಂವ ನೂತನ ನಗರಸಭೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಶಿಗ್ಗಾಂವ ಪಟ್ಟಣಕ್ಕೆ ಯೋಜನಾ ಪ್ರಾಧಿಕಾರ ಒಂದು ಪ್ಲಾನಿಂಗ್ ಅಥಾರಿಟಿ ಮಾಡೋ ವಿಚಾರವಿದೆ. ಶಿಗ್ಗಾಂವಿ, ಸವಣೂರು, ಬಂಕಾಪುರಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದು. ಜಿ +1 ಮನೆ ನಿರ್ಮಾಣ ಕೆಲಸ ಭರದಿಂದ ಸಾಗಿದ್ದು, ಆದಷ್ಟು ಬೇಗ ಮನೆಗಳನ್ನ ವಿತರಣೆ ಮಾಡಲಾಗುತ್ತದೆ ಎಂದರು.
ಪುರಸಭೆಗೆ ಆಯ್ಕೆಯಾದ ಎಲ್ಲರೂ ಎಲ್ಲ ವಾರ್ಡ್ ಗಳ ಅಭಿವೃದ್ಧಿಗೆ ಶ್ರಮಿಸಬೇಕು. ನಾನು ಸಿಎಂ ಆದ ನಂತರ ಜನರ ನಿರೀಕ್ಷೆಗಳು ಹೆಚ್ಚಾಗಿವೆ. ತಾವು ಹೇಳಿದ ಎಲ್ಲ ಕೆಲಸಗಳನ್ನ ನಾನು ಮಾಡಿಕೊಡುತ್ತೇನೆ. ಶಿಗ್ಗಾಂವ ಪಟ್ಟಣವನ್ನು ಮಾದರಿ ಪಟ್ಟಣ ಮಾಡೋ ಸಂಕಲ್ಪ ಮಾಡೋಣ ಎಂದರು.
ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ, ನಮ್ಮವರು ಮುಖ್ಯಮಂತ್ರಿಗಳಾಗಿದ್ದಾರೆ, ಇದು ಉತ್ತರ ಕರ್ನಾಟಕದ ಸೌಭಾಗ್ಯ. ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಅವಧಿಯನ್ನು ಪೂರ್ಣಗೊಳಿಸಲಿ. ಉತ್ತರ ಕರ್ನಾಟಕಕ್ಕೆ ತಮ್ಮದೇ ಆದ ಕೊಡುಗೆ ನೀಡಲಿ ಎಂದ ಅವರು, ನಾನು ಸಭಾಪತಿಯಾಗಲು ಬಸವರಾಜ ಬೊಮ್ಮಾಯಿ ಸಹಕಾರ ಬಹಳವಿದೆ ಎಂದು ಸ್ಮರಿಸಿದರು.