ದೆಹಲಿಯಲ್ಲಿ ಒಂದೇ ದಿನದಲ್ಲಿ ಸುರಿದ ತಿಂಗಳಿಗೆ ಬೀಳುವ ಮಳೆ..19 ವರ್ಷಗಳಲ್ಲಿ ಅತಿ ಹೆಚ್ಚು..!
ದೆಹಲಿಯಲ್ಲಿ ಒಂದೇ ದಿನದಲ್ಲಿ ಸುರಿದ ತಿಂಗಳಿಗೆ ಬೀಳುವ ಮಳೆ..19 ವರ್ಷಗಳಲ್ಲಿ ಅತಿ ಹೆಚ್ಚು..!
ಬುಧವಾರ ಬೆಳಿಗ್ಗೆ 8.30ರಿಂದ ಆರಂಭವಾಗಿ, ಕೇವಲ ಮೂರು ಗಂಟೆಗಳಲ್ಲಿ ನಗರದಲ್ಲಿ 75.6 ಮಿ. ಮೀ. ಮಳೆ ಸುರಿಯಿತು. ಇದರರ್ಥ, ದೆಹಲಿಯು ತಿಂಗಳ ಆರಂಭದಲ್ಲೇ ವಾಡಿಕೆಗಿಂತ ಹೆಚ್ಚು ಮಳೆ ದಾಖಲಿಸಿದೆ. ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಸರಾಸರಿ 125.1 ಮಿ.ಮೀ. ಮಳೆಯಾಗುತ್ತದೆ.
2002ರ ಸೆಪ್ಟೆಂಬರ್ 13ರಂದು 126.8 ಮಿ.ಮೀ. ಮಳೆಯಾಗಿತ್ತು. 1963ರ ಸೆಪ್ಟೆಂಬರ್ 16ರಂದು 172.6 ಮಿ.ಮೀ. ಮಳೆಯಾಗಿದ್ದು ಇದುವೆರಗಿನ ಸಾರ್ವಕಾಲಿಕ ದಾಖಲೆಯಾಗಿದೆ.
ಭಾರೀ ಮಳೆ ನಗರದ ಕೆಲವು ಭಾಗಗಳಲ್ಲಿ ಸಂಚಾರದ ಮೇಲೆ ಪರಿಣಾಮ ಬೀರಿತು. ಬುಧವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 2.30ರ ನಡುವೆ ಅಂದರೆ, ಕೇವಲ ಆರು ಗಂಟೆಗಳಲ್ಲಿ 84 ಮಿ.ಮೀ. ಮಳೆಯಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದರಿಂದ ಐಟಿಒ, ರಿಂಗ್ ರೋಡ್, ಐಪಿ ಎಸ್ಟೇಟ್ ಫ್ಲೈಓವರ್, ಧೌಲಾ ಬಳಿ ಸಂಚಾರ ದಟ್ಟಣೆ ಉಂಟಾಯಿತು.
ಹವಾಮಾನ ಬದಲಾವಣೆಯಿಂದಾಗಿ ಮುಂಗಾರು ಮಳೆಯ ಸಂರಚನೆಯಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ನ ಉಪಾಧ್ಯಕ್ಷ ಮಹೇಶ್ ಪಾಲಾವತ್ ಹೇಳಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಮಳೆ ಸುರಿಯುವ ದಿನಗಳು ಕಡಿಮೆಯಾಗಿದ್ದು, ವ್ಯತಿರಿಕ್ತ ವಿದ್ಯಮಾನಗಳು ಹೆಚ್ಚುತ್ತಿವೆ ಎಂದು ತಿಳಿಸಿದ್ದಾರೆ.
ಇಂತಹ ಮಳೆಯಿಂದ ಅಂತರ್ಜಲ ಮರುಪೂರಣವಾಗುವ ಬದಲು, ತಗ್ಗು ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗುತ್ತದೆ. ನಾಲ್ಕೈದು ದಿನಗಳಲ್ಲಿ ನಿಧಾನವಾಗಿ ಮಳೆ ಬಂದರೆ ನೀರು ಭೂಮಿ ಆಳಕ್ಕೆ ಇಳಿಯುತ್ತದೆ. ಆದರೆ ರಭಸದ ಮಳೆಯಾದಲ್ಲಿ, ನೀರು ಹರಿದುಹೋಗುತ್ತವೆ ಎಂದು ಅವರು ಹೇಳಿದ್ದಾರೆ.