Karnataka Rains : ಕರ್ನಾಟಕದಲ್ಲಿ ಮತ್ತೆ ಮಳೆ ದುರ್ಬಲ: ನಿರಾತಂಕ

ಬೆಂಗಳೂರು, ಸೆಪ್ಟಂಬರ್ 30: ಕರ್ನಾಟಕದ ನಿರಂತರ ಸುರಿದ ಮಳೆಗೆ ಕೆರೆ, ಕಟ್ಟೆಗಳು ಒಡೆದ ಪರಿಣಾಮ ತತ್ತರಿಸಿದ್ದ ವಿವಿಧ ಜಿಲ್ಲೆಗಳಲ್ಲಿ ಜನರ ಆತಂಕ ಇದೀಗ ದೂರವಾಗಿದೆ. ರಾಜ್ಯದಲ್ಲಿ ಒಂದೇ ದಿನದ ಅಂತರದಲ್ಲಿ ಮತ್ತೆ ಮುಂಗಾರು ದುರ್ಬಲವಾಗಿದೆ.
ನಿರಂತರವಾಗಿ ಸುರಿದ ಮಳೆಯಿಂದಾಗಿ ವಿವಿಧ ಜಿಲ್ಲೆಗಳಲ್ಲಿ ಕೆರೆ ಕಟ್ಟೆಗಳು ಒಡೆದು, ರಸ್ತೆಗಳು, ಊರುಗಳು ಜಲಾವೃತವಾಗಿದ್ದವು.
ಶನಿವಾರದಿಂದ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಹಗುರ ಇಲ್ಲವೇ ಸಾಧಾರಣ ಮಳೆ ಆಗಲಿದೆ. ಇದರ ಹೊರತು ಯಾವುದೇ ಜಿಲ್ಲೆಗಳಲ್ಲಿ ಜೋರು ಮಳೆಯ ಮುನ್ಸೂಚನೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ಅತ್ಯಂತ ಕಡಿಮೆ ಮಳೆ ದಾಖಲು
ಕರಾವಳಿ ಮತ್ತು ಒಳನಾಡು ಜಿಲ್ಲೆಗಳು ಸೇರಿದಂತೆ ಒಟ್ಟು ಹತ್ತು ಜಿಲ್ಲೆಗಳಿಗೆ ಶುಕ್ರವಾರ ಭಾರಿ ಮಳೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿತ್ತು. ಆದರೆ ಈ ಭಾಗಗಳಲ್ಲಿ ನಿರೀಕ್ಷಿತ ಮಳೆ ಆಗಿಲ್ಲ ಎನ್ನಲಾಗಿದೆ. ಇನ್ನು ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 6ಸೆಂ.ಮೀ, ಕೊಟ್ಟೂರು 5, ಬಬಲೇಶ್ವರ, ರಾಮದುರ್ಗ, ರಾಯಚೂರಿನ ಮಾನ್ವಿ, ಸಿರಗುಪ್ಪಾದಲ್ಲಿ ತಲಾ 4ಸೆಂ.ಮೀ ಮಳೆ ಆಗಿದೆ. ಇದರ ಹೊರತು ಎಲ್ಲಿಯೂ ದಾಖಲೆಯ ಮಳೆ ಬಿದ್ದಿಲ್ಲ ಎಂದು ವರದಿ ತಿಳಿಸಿದೆ.
ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಹಗುರದಿಂದ ಸಾಧಾರಣ ಇಲ್ಲವೇ ತುಂತುರು ಮಳೆ ಆಗಲಿದೆ. ಕರಾವಳಿ ಭಾಗಕ್ಕೆ ಮತ್ತೆ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.