ಮತಾಂತರಿತ ದಲಿತರಿಗೆ ಎಸ್‌ಸಿ ಸ್ಥಾನಮಾನ ಪರಿಶೀಲನೆಗೆ ರಚಿಸಿದ ಆಯೋಗ ಪ್ರಶ್ನಿಸಿದ ಅರ್ಜಿ ನಿರಾಕರಿಸಿದ ಸುಪ್ರೀಂಕೋರ್ಟ್

ಮತಾಂತರಿತ ದಲಿತರಿಗೆ ಎಸ್‌ಸಿ ಸ್ಥಾನಮಾನ ಪರಿಶೀಲನೆಗೆ ರಚಿಸಿದ ಆಯೋಗ ಪ್ರಶ್ನಿಸಿದ ಅರ್ಜಿ ನಿರಾಕರಿಸಿದ ಸುಪ್ರೀಂಕೋರ್ಟ್

ಹೊಸದಿಲ್ಲಿ: ಕ್ರೈಸ್ತ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಿಕೆ ಕುರಿತು ಪರಿಶೀಲಿಸಲು ಆಯೋಗ ರಚಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಸಂವಿಧಾನದ ವಿಧಿ 341 ಅನ್ವಯ ರಾಷ್ಟ್ರಪತಿಗಳ ಆದೇಶದಲ್ಲಿ ಹಿಂದು, ಸಿಖ್‌ ಮತ್ತು ಬೌದ್ಧ ಧರ್ಮಗಳವರಿಗೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ ಲಭ್ಯವಿದೆಯೆಂದು ತಿಳಿಸಿರುವುದರಿಂದ ಈ ಆದೇಶದಲ್ಲಿ ಸೇರ್ಪಡೆಗೊಳ್ಳದ ಧರ್ಮಗಳಿಗೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಬಹುದೇ ಎಂದು ಪರಿಶೀಲಿಸಲು ಕೇಂದ್ರ ಸರ್ಕಾರ ಅಕ್ಟೋಬರ್‌ 6 ರಂದು ಆಯೋಗ ರಚಿಸಿತ್ತು.

ಈ ಆಯೋಗ ರಚನೆಯಿಂದಾಗಿ, ಸುಪ್ರೀಂ ಕೋರ್ಟಿನಲ್ಲಿ ಕಳೆದ ಸುಮಾರು 20 ವರ್ಷಗಳಿಂದ ಬಾಕಿಯಿರುವ ಇನ್ನೊಂದು ಅರ್ಜಿಯ ವಿಚಾರಣೆಗೆ ವಿಳಂಬವುಂಟಾಗಬಹುದು ಮತ್ತು ಪರಿಶಿಷ್ಟ ಜಾತಿ ಮೂಲದ ಕ್ರೈಸ್ತರಿಗೆ ಸರಿಪಡಿಸಲಾಗದ ಹಾನಿಯುಂಟಾಗಬಹುದು ಎಂದು ಸೆಂಟರ್‌ ಫಾರ್‌ ಪಬ್ಲಿಕ್‌ ಲಿಟಿಗೇಶನ್‌ ಎಂಬ ಎನ್‌ಜಿಒ ತನ್ನ ಅರ್ಜಿಯಲ್ಲಿ ಹೇಳಿತ್ತು.

ಆಯೋಗ ರಚಿಸುವ ಅಧಿಕಾರ ಸರಕಾರಕ್ಕಿದೆ. ನೀವು ಆ ಆಯೋಗ ರಚನೆಯನ್ನು ಪ್ರಶ್ನಿಸುತ್ತಿದ್ದೀರಿ. ಯಾವ ನಿಯಮ ಅಥವಾ ಕಾನೂನು ನಿಮಗೆ ಹೀಗೆ ಮಾಡಲು ಅನುಮತಿಸುತ್ತದೆ?" ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಎ ಎಸ್‌ ಓಕಾ ಅವರ ಪೀಠ ಪ್ರಶ್ನಿಸಿದೆ.

ಆಯೋಗ ರಚನೆಯನ್ನು ರದ್ದುಪಡಿಸಲು ಯಾವುದೇ ಸೂಕತ ಕಾರಣಗಳಿಲ್ಲ ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ.

ಸರ್ಕಾರ ರಚಿಸಿದ ಆಯೋಗದ ನೇತೃತ್ವವನ್ನು ಮಾಜಿ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್‌ ವಹಿಸಿದ್ದಾರೆ ಹಾಗೂ ನಿವೃತ ಐಎಎಸ್‌ ಅಧಿಕಾರಿ ರವೀಂದರ್‌ ಕುಮಾರ್‌ ಜೈನ್‌ ಹಾಗೂ ಯುಜಿಸಿ ಸದಸ್ಯೆ ಪ್ರೊ ಸುಷ್ಮಾ ಯಾದವ್‌ ಈ ಸಮಿತಿಯಲ್ಲಿದ್ದಾರೆ.