ಸರಣಿ ಅಪಘಾತ : ೩೨ ಮಂದಿ ದುರ್ಮರಣ

ಲಕ್ನೋ, ಅ.೨- ಉತ್ತರ ಪ್ರದೇಶದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಟ್ಟು ೩೨ ಮಂದಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.ಕಾನ್ಪುರದಲ್ಲಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ಕೊಳಕ್ಕೆ ಬಿದ್ದ ಪರಿಣಾಮ ೨೭ ಮಂದಿ ಸಾವನ್ನಪ್ಪಿದ್ದಾರೆ. ಬಲಿಯಾದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಕುಟುಂಬ ಸದಸ್ಯರ ರೋಧನ ಮುಗಿಲುಮುಟ್ಟಿದೆ.ಟ್ರ್ಯಾಕ್ಟರ್-ಟ್ರಾಲಿಯಲ್ಲಿ ೫೦ ಜನ ಪ್ರಯಾಣಿಕರೊಂದಿಗೆ ಫತೇಪುರದ ಚಂದ್ರಿಕಾ ದೇವಿ ದೇವಸ್ಥಾನದಲ್ಲಿ “ಮುಂಡನ್” ಸಮಾರಂಭದಲ್ಲಿ ಭಾಗವಹಿಸಿದ ನಂತರ ಘಟಂಪುರಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಕ್ ಜಿ ಅಯ್ಯರ್ ಹೇಳಿರುವ ಪ್ರಕಾರ, ಹತ್ತಕ್ಕೂ ಹೆಚ್ಚು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳಿಗೆ ಸಮೀಪದ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಉತ್ತರ ಪ್ರದೇಶದ ಕಾನ್ಪುರದ ಅಹಿರ್ವಾನ್ ಮೇಲ್ಸೇತುವೆಯಲ್ಲಿ ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಐದು ಜನರು ಸಾವನ್ನಪ್ಪಿದ್ದು ಎಂಟು ಮಂದಿ ಗಾಯಗೊಂಡಿದ್ದಾರೆ.ಯುಪಿ ಪೊಲೀಸರ ಪ್ರಕಾರ, ಅಹಿರ್ವಾನ್ ಮೇಲ್ಸೇತುವೆಯಲ್ಲಿ ವೇಗವಾಗಿ ಬಂದ ಟ್ರಕ್ ಲೋಡರ್ ಟೆಂಪೋಗೆ ಡಿಕ್ಕಿ ಹೊಡೆದು ಐವರು ಸಾವನ್ನಪ್ಪಿದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆಯ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ.ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ೨ ಲಕ್ಷ ರೂ. ಹಾಗೂ ಗಾಯಾಳುಗಳಿಗೆ ೫೦ ಸಾವಿರ ರೂ ಪರಿಹಾರವನ್ನು ನೀಡುವುದಾಗಿ ಘೋಷಿಸಲಾಗಿದೆ.