ಹೆಲಿಕಾಪ್ಟರ್ ಪತನ: ಬೆಂಗಳೂರಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಡುತ್ತಿದ್ದ ವರುಣ್ ಸಿಂಗ್ ಚಿಕಿತ್ಸೆ ಫಲಿಸದೆ ಸಾವು

ಬೆಂಗಳೂರು: ತಮಿಳುನಾಡಿನ ಕುನೂರು ಬಳಿ ನಡೆದ ವಿಮಾನ ಅಪಘಾತದಲ್ಲಿ ಬದುಕಿ ಉಳಿದಿದ್ದ ಏಕೈಕ ಯೋಧ ಐಎಎಫ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.
ಭಾರತೀಯ ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಸೇರಿ 11 ಮಂದಿ ಡಿ.8ರಂದು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್(Mi-17V5) ತಮಿಳುನಾಡಿನ ಕೊನೂರು ಸಮೀಪ ಪತನಗೊಂಡಿತ್ತು. ಈ ದುರಂತದಲ್ಲಿ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯ್ತೇಜ್, ಹವಲ್ದಾರ್ ಸತ್ಪಾಲ್ ಮೃತಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರೊಬ್ಬರು ಮಾತ್ರ ಬದುಕುಳಿದಿದ್ದರು. ತಮಿಳುನಾಡಿನ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರನ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ನುರಿತ ವೈದ್ಯರ ತಂಡ ವರುಣ್ ಸಿಂಗ್ರನ್ನು ಬದುಕಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು.
ಶೌರ್ಯಚಕ್ರ ಪುರಸ್ಕೃತ ಕ್ಯಾಪ್ಟನ್ ವರುಣ್ ಸಿಂಗ್ ಅವರು ನಿವೃತ್ತ ಕರ್ನಲ್ ಕೆ.ಪಿ.ಸಿಂಗ್ ಅವರ ಮಗ. 2020ರಲ್ಲಿ ತೇಜಸ್ ಯುದ್ಧ ವಿಮಾನ ರಕ್ಷಣೆ ಮಾಡಿದ್ದಕ್ಕಾಗಿ ವರುಣ್ ಸಿಂಗ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.