ಯಡಿಯೂರಪ್ಪ ವಿರುದ್ಧದ ತನಿಖೆಗೆ ತಡೆಯಾಜ್ಞೆ ವಿಸ್ತರಣೆ
ಹೊಸದಿಲ್ಲಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ವಸತಿ ಯೋಜನೆಯೊಂದರ ಕಾಮಗಾರಿ ಗುತ್ತಿಗೆ ನೀಡಲು ಗುತ್ತಿಗೆದಾರರಿಂದ ಲಂಚ ಪಡೆದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣದ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ಸೋಮವಾರ ವಿಸ್ತರಿಸಿದೆ.
ನ್ಯಾ| ಡಿ. ವೈ. ಚಂದ್ರಚೂಡ್ ಹಾಗೂ ನ್ಯಾ| ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠವು ಬಿಎಸ್‌ವೈ ಅರ್ಜಿಗೆ ಸಂಬಂಧಿಸಿ ಕರ್ನಾಟಕ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತು.
ಯಡಿಯೂರಪ್ಪ ಅವರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಸಿದ್ಧಾರ್ಥ ದವೆ, ಈ ಪ್ರಕರಣದಲ್ಲಿ ಕರ್ನಾಟಕ ಸರಕಾರವು ಪ್ರತಿವಾದಿಯಲ್ಲ ಎಂದರು. ಆಗ ನ್ಯಾಯಪೀಠ, ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರ ಖಾಸಗಿ ದೂರಿನ ಪ್ರಕರಣ ಇದಾಗಿದ್ದರೂ ನಾವು ರಾಜ್ಯ ಸರಕಾರದ ಸಹಾಯ ಪಡೆಯಬಹುದಾಗಿದೆ ಎಂದು ಹೇಳಿತು.
ಯಡಿಯೂರಪ್ಪ ವಿರುದ್ಧ ತನಿಖೆಗೆ ಸೆ.23ರಂದು ನೀಡಿದ್ದ ತಡೆಯಾಜ್ಞೆಯು ಮುಂದಿನ ಆದೇಶದ ವರೆಗೆ ಮುಂದುವರಿಯಲಿದೆ ಎಂದು ನ್ಯಾಯಪೀಠ ಹೇಳಿತು.
ಈ ಪ್ರಕರಣಕ್ಕೆ ಸಂಬಂಧಿಸಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ, ಅವರ ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ, ಮೊಮ್ಮಗ ಶಶಿಧರ ಮರಡಿ, ಅಳಿಯ ಸಂಜಯ್ ಶ್ರೀ, ಐಎಎಸ್ ಅಧಿಕಾರಿ ಜಿ.ಸಿ.ಪ್ರಕಾಶ್, ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಂ ಮತ್ತು ಉದ್ಯಮಿ ಕೆ.ರವಿ ಅವರ ವಿರುದ್ಧದ ತನಿಖೆ ಮುಂದುವರಿದಿದೆ.