ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನಲ್ಲಿ ದಿನಾಂಕ ಇಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ ಕುಮಾರ ರವರು ಭಾಗವಹಿಸಿ ಮಾತನಾಡಿ, ಮಾನಸಿಕ ಆರೋಗ್ಯವನ್ನು ಆರಂಭದಲ್ಲೆ ಗುರುತಿಸಿದರೆ, ಅದನ್ನು ಗುಣಪಡಿಸಬಹುದೆಂದು ತಿಳಿಸಿದರು. ಮಾನಸಿಕ ರೋಗಿಗಳನ್ನು ಸದಾ ಮುಖ್ಯ ವಾಹಿನಿಗೆ ತಂದು, ನಮ್ಮ ಜತೆಗೆ ಇರುವಂತೆ ನೋಡಿಕೊಳ್ಳಬೇಕು. ಅವರ ಪೋಷಕರಿಗೆ ಇದನ್ನು ಮನದಟ್ಟಾಗಿಸಬೇಕು ಎಂದು ಹೇಳಿದರು. ಉತ್ತಮ ಮನುಷ್ಯನಾಗಲು, ಒಳ್ಳೆಯ ವಿಷಯಗಳಲ್ಲಿ ಪಾಂಡಿತ್ಯ ಹೊಂದಲು ಮತ್ತು ಸಾಕಷ್ಟು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಪ್ರತಿಯೊಬ್ಬನಿಗೂ ಮಾನಸಿಕ ಸಮತೋಲನ ಅತಿ ಅಗತ್ಯ ಎಂದು ಹೇಳಿದರು.
ಆಡಳಿತ ಮಂಡಳಿಯ ಸದಸ್ಯೆಯಾದ ಶ್ರೀಮತಿ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿಗಳಾದ ಡಾ. ಎಸ್. ಕೆ. ಜೋಶಿ ಮತ್ತು ಶ್ರೀ ಜೀವಂಧರ್ ಕುಮಾರ್, ಕುಲಸಚಿವ ಡಾ. ಲೆ. ಕ. ಯು. ಎಸ್. ದಿನೇಶ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆ ಡಾ. ರತ್ನಮಾಲಾ ಎಂ ದೇಸಾಯಿ ಮತ್ತಿತರು ಉಪಸ್ಥಿತರಿದ್ದರು.
ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ಮಾನಸಿಕ ವಿಭಾಗದ ಮುಖ್ಯಸ್ಥ ಡಾ. ಅಭಯ್ ಮಟ್ಕರ್ ಅತಿಥಿಗಳನ್ನು ಸ್ವಾಗತಿಸಿ, ಡಾ. ಸ್ವಾತಿ ಮಾನಸಿಕ ಅಸಮತೋಲನದಿಂದಾಗುವ ಪರಿಣಾಮಗಳನ್ನು ವಿವರಿಸಿದರಲ್ಲದೆ, ಒಂದು ವಾರಗಳ ಕಾಲ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ವಿವರಿಸಿದರು.
ಡಾ. ಶಿವಾಂಗಿ ಕಾರ್ಯಕ್ರಮವನ್ನು ನಿರ್ವಹಿಸಿದರೆ, ಡಾ ಗಿರೀಶ್ ಬಾಬು ವಂದನಾರ್ಪಣೆ ಮಾಡಿದರು. ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪ್ರತ್ಯೇಕ ಕೌನ್ಸಿಲಿಂಗ್ ವಿಭಾಗ ಸ್ವಸ್ತಿಯನ್ನು ಉಪ ಕುಲಪತಿಗಳು ಆರಂಭಿಸಿದರು.