ಖಾದಿ, ಕಾಟನ್‌ ಬಟ್ಟೆಗಳ ಪ್ರದರ್ಶನ ಹಾಗೂ ರಿಯಾಯಿತಿ ಮಾರಾಟ ಮೇಳ,

ಖಾದಿ, ಕಾಟನ್‌ ಬಟ್ಟೆಗಳ ಪ್ರದರ್ಶನ ಹಾಗೂ ರಿಯಾಯಿತಿ ಮಾರಾಟ ಮೇಳ,
ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿಂದು ಖಾದಿ ಮತ್ತು ಕಾಟನ್ ಬಟ್ಟೆಗಳ ಪ್ರದರ್ಶನ ಹಾಗೂ ರಿಯಾಯತಿ ದರದ ಮಾರಾಟ ಮೇಳಕ್ಕೆ ಚಾಲನೆ ನೀಡಲಾಯಿತು. ಶ್ರೀ ಧರ್ಮಸ್ಥಳ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಈ ಪ್ರದರ್ಶನವನ್ನು ಎಸ್. ಡಿ ಎಮ್. ವಿಶ್ವವಿದ್ಯಾಲಯದ ಉಪಕುಲಪತಿಗಳಾದಂತಹ ಡಾ. ನಿರಂಜನ ಕುಮಾರ ರವರು ಹಾಗೂ ಆಡಳಿತ ನಿರ್ದೇಶಕರಾದಂತಹ ಶ್ರೀಮತಿ ಪದ್ಮಾಲತಾ ನಿರಂಜನಕುಮಾರ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ನಿರಂಜನಕುಮಾರ ಅವರು ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಗ್ರಾಮೀಣ ಬಡ ಮಹಿಳೆಯರಿಗೆ ಅನುಕೂಲವಾಗಲೆಂದು ಹಾಗೂ ಮಹಿಳಾ ಸಬಲೀಕರಣಗೊಳಿಸಲು ‘ಸಿರಿ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾಗಿ ತಿಳಿಸಿದರು. ಅವರ ಆಶಯದಂತೆ ಪ್ರತಿಯೊಬ್ಬರೂ ಖಾದಿ ಹಾಗೂ ಕಾಟನ್ ಬಟ್ಟೆಗಳನ್ನು ಹೆಚ್ಚಾಗಿ ಧರಿಸುವ ಮೂಲಕ ಗ್ರಾಮೀಣ ಬಡ ಮಹಿಳೆಯರಿಗೆ ಉದ್ಯೋಗದಲ್ಲಿ ಸಹಕರಿಸುವಂತೆ ಕೇಳಿಕೊಂಡರು. ಖಾದಿ ಹಾಗೂ ಕಾಟನ್ ಬಟ್ಟೆಗಳನ್ನು ಧರಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದೆಂದರು. ಈ ಸಂದರ್ಭದಲ್ಲಿ ವಸ್ತು ಪ್ರದರ್ಶನದ ವ್ಯವಸ್ಥಾಪಕರಾದ ಜೀವನ ಕುಮಾರ ಶೆಟ್ಟಿ, ಮಾರಾಟ ಮಳಿಗೆ ವ್ಯವಸ್ಥಾಪಕರಾದ ನಾಗಕುಮಾರ ಜೈನ ಮತ್ತು ಮಾರಾಟ ಮಳಿಗೆ ಪ್ರತಿನಿಧಿ ಮಲ್ಲಿಕಾರ್ಜುನ ಹೊಸಮನಿ, ಧರಣೇಂದ್ರ ಪಕ್ಕಳ ಉಪಸ್ಥಿತರಿದ್ದರು. ಈ ಮಾರಾಟ ಮಳಿಗೆಯು ಇಂದಿನಿಂದ ಆರಂಭಗೊಂಡಿದ್ದು, ಇದೇ ನವೆಂಬರ್ 02 ರ ವರೆಗೆ ಲಭ್ಯವಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.