ವಾಲ್ಮೀಕಿ ಜಯಂತಿ ಪೂರ್ವಭಾವಿ ಸಿದ್ದತಾ ಸಭೆಗೆ ಬಹಿಷ್ಕಾರ

ವಾಲ್ಮೀಕಿ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಸಂಡೂರು ಪಂಚಾಯತ್ ಸಭಾಂಗಣದಲ್ಲಿ ಕರೆಯಲಾಗಿದ್ದ ತಾಲೂಕಾ ಮಟ್ಟದ ಸಭೆಯನ್ನು ವಾಲ್ಮೀಕಿ ಸಮುದಾಯವು ಬಹಿಷ್ಕರಿಸಿ ಹೊರ ನಡೆದ ಘಟನೆ ಜರುಗಿದೆ. ಅಷ್ಟೇ ಅಲ್ಲ, ಈ ಬಾರಿ ವಾಲ್ಮೀಕಿ ಜಯಂತಿಯನ್ನು ಕರಾಳ ದಿನವಾಗಿ ಆಚರಿಸುವ ಬಗ್ಗೆ ಸಹ ಎಚ್ಚರಿಕೆಯನ್ನು ನೀಡಲಾಗಿದೆ. ವಾಲ್ಮೀಕಿ ಜಯಂತಿ ಆಚರಣೆಯ ನಿಮಿತ್ತ ಇಂದು ಸಂಡೂರಿನಲ್ಲಿ ಕರೆಯಲಾಗಿದ್ದ ತಾಲೂಕಾ ಮಟ್ಟದ ಅಧಿಕಾರಿಗಳ ನೇತೃತ್ವದ ಪೂರ್ವ ಭಾವಿ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ. ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರಾದ ತಹಸಿಲ್ದಾರರು ಹಾಗೂ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಪೂರ್ವಭಾವಿ ಸಿದ್ದತಾ ಸಭೆಗೆ ಗೈರಾಗಿದ್ದರಿಂದ ಆಕ್ರೋಶಗೊಂಡ ವಾಲ್ಮೀಕಿ ಸಮುದಾಯ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಭೆ ಬಹಿಷ್ಕರಿಸಿ ವಾಲ್ಮೀಕಿ ಸಮುದಾಯ ಹಾಗೂ ವಿವಿಧ ಸಂಘಟನೆ ಮುಖಂಡರು ಸಭೆಯಿಂದ ಹೊರ ನಡೆದಿದ್ದಾರೆ. ಇದಲ್ಲದೇ ಕೆಲ ಕಾಲ ತಾಲೂಕು ಪಂಚಾಯ್ತಿ ಮುಂದೆ ಧರಣಿ ನಡೆಸಿ, ತಹಸಿಲ್ದಾರ್ ವಿರುದ್ಧ ಘೋಷಣೆಯನ್ನು ಸಹ ಕೂಗಿದ ಘಟನೆ ಜರುಗಿದೆ. ಪದೇ ಪದೇ ವಾಲ್ಮೀಕಿ ಸಮುದಾಯವನ್ನ ತಾಲೂಕು ಆಡಳಿತ ನಿರ್ಲಕ್ಷ ವಹಿಸುತ್ತಿದೆ. ಪ್ರತಿ ಜಯಂತಿಗೂ ಅಧಿಕಾರಿಗಳ ನಿರ್ಲಕ್ಷ ವಹಿಸುತ್ತಿದ್ದಾರೆ. ಹೀಗಾಗಿ, ಈ ಬಾರಿ ವಾಲ್ಮೀಕಿ ಜಯಂತಿಯನ್ನು ಕರಾಳ ದಿನವಾಗಿ ಆಚರಿಸುವುದಾಗಿ ವಾಲ್ಮೀಕಿ ಮುಖಂಡರು ಎಚ್ಚರಿಸಿದ್ದಾರೆ.