ಸಾರಿಗೆ ನಿಗಮಗಳ ಪುನಶ್ಚೇತನಕ್ಕೆ ತಜ್ಞರ ಸಮಿತಿ ರಚನೆ: ಬೊಮ್ಮಾಯಿ

ಸಾರಿಗೆ ನಿಗಮಗಳ ಪುನಶ್ಚೇತನಕ್ಕೆ ತಜ್ಞರ ಸಮಿತಿ ರಚನೆ: ಬೊಮ್ಮಾಯಿ

ಬೆಂಗಳೂರು: ರಾಜ್ಯದ ಎಲ್ಲ ಸಾರಿಗೆ ನಿಗಮಗಳ ಪುನಶ್ಚೇತನಕ್ಕೆ ತಜ್ಞರ ಸಮಿತಿ ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್ ಟಿಸಿ) 60ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ನಾಲ್ಕು ಸಾರಿಗೆ ನಿಗಮಗಳ 60 ಚಾಲಕರಿಗೆ ಅಪಘಾತ ರಹಿತ ಚಾಲನೆಗಾಗಿ ಮುಖ್ಯಮಂತ್ರಿಯವರ ಚಿನ್ನದ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು.

ಸಾರಿಗೆ ನಿಗಮಗಳ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿಗೆ ಐದು ತಿಂಗಳ ಕಾಲಾವಕಾಶ ನೀಡಲಾಗುವುದು‌. ವರದಿಯ ಆಧಾರದಲ್ಲಿ ಮುಂದಿನ ಬಜೆಟ್ ನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.

ಸರ್ಕಾರದ ಸಾರಿಗೆ ನಿಗಮಗಳಿಗೆ ಎಲ್ಲ ಅವಧಿಯಲ್ಲೂ ಸಹಕಾರ ದೊರಕಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ₹2,300 ಕೋಟಿ ನೀಡಲಾಗಿತ್ತು. ತಾವು ಅಧಿಕಾರ ಸ್ವೀಕರಿಸಿದ ಬಳಿಕ ₹ 130 ಕೋಟಿ ನೀಡಲಾಗಿದೆ ಎಂದರು.

ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳ ನೌಕರರು ತಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ವಿನಿಯೋಗಿಸಿ ಸಂಸ್ಥೆಗಳನ್ನು ಲಾಭದ ಹಾದಿಗೆ ತರಬೇಕು. ಇದಕ್ಕೆ ಅಗತ್ಯವಿರುವ ಎಲ್ಲ ಸಹಕಾರಗಳನ್ನೂ ಸರ್ಕಾರ ನೀಡಲಿದೆ ಎಂದರು.