2018ರಲ್ಲಿ ನಾನು ಸಿಎಂ ಸ್ಥಾನದಲ್ಲಿದ್ದಿದ್ದು ನಿಜ; ಬಿಟ್ ಕಾಯಿನ್ ಬಗ್ಗೆ ಯಾರೂ ದೂರು ಕೊಟ್ಟಿರಲಿಲ್ಲ; BJPಯವರಿಗೆ ಗೊತ್ತಿದ್ದರೆ ಯಾಕೆ ಸುಮ್ಮನಿದ್ದರು..?; ಕೇಸರಿ ನಾಯಕರಿಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ಬಿಟ್ ಕಾಯಿನ್ ಬಡಿದಾಟ ಪ್ರಕರಣ ತಾರಕಕ್ಕೇರಿದ್ದು, ಪರಸ್ಪರ ವಾಕ್ಸಮರ ಮುಂದುವರೆದಿದೆ. ಬಿಟ್ ಕಾಯಿನ್ ಹಗರಣದಲ್ಲಿ ಯಾರಿದ್ದಾರೆ ಎಂಬುದು ಬಿಜೆಪಿಯವರಿಗೇ ಗೊತ್ತಾಗಬೇಕು.
ಸುದ್ದಿಗಾರರೊಂದಿಗೆ ಮಾತನಡಿದ ಸಿದ್ದರಾಮಯ್ಯ, 2018ರಲ್ಲಿ ನಾನು ಸಿಎಂ ಸ್ಥಾನದಲ್ಲಿದ್ದದ್ದು ನಿಜ. ಆದರೆ ಬಿಟ್ ಕಾಯಿನ್ ಹಗರಣದ ಬಗ್ಗೆ ಯಾರೂ ದೂರು ನೀಡಿರಲಿಲ್ಲ. ಕೇಸ್ ದಾಖಲಾಗದೇ ನಮಗೆ ಹೇಗೆ ಗೊತ್ತಾಗುತ್ತೆ? ಒಂದು ವೇಳೆ ಬಿಜೆಪಿ ನಾಯಕರಿಗೆ ಗೊತ್ತಿದ್ದರೆ ಯಾಕೆ ಸುಮ್ಮನಿದ್ದರು? ಆಗ ವಿಪಕ್ಷ ಸ್ಥಾನದ ಜವಾಬ್ದಾರಿಯಲ್ಲಿದ್ದ ಬಿಜೆಪಿ ನಾಯಕರು ಪ್ರಕರಣ ಹೊರತರಬೇಕಿತ್ತು ಎಂದು ತಿರುಗೇಟು ನೀಡಿದರು.
ನಲಪಾಡ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಆಗ ಯಾವುದೇ ಬಿಟ್ ಕಾಯಿನ್ ಕೇಸ್ ಬಗ್ಗೆ ಕೇಳಿಬಂದಿಲ್ಲ. ಬಿಜೆಪಿ ನಾಯಕರ ಪ್ರಶ್ನೆಗಳಿಗೆ ನಾವು ಉತ್ತರ ಕೊಡುವ ಮೊದಲು ರಣದೀಪ್ ಸುರ್ಜೇವಾಲ ಕೇಳಿರುವ ಹಲವು ಪ್ರಶ್ನೆಗೆ ಬಿಜೆಪಿ ನಾಯಕರು ಮೊದಲು ಉತ್ತರಿಸಲಿ. ಬಿಟ್ ಕಾಯಿನ್ ಕೇಸ್ ಸಿಎಂ ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ನಡೆದಿರುವ ಪ್ರಕರಣ. ಕೇಸ್ ನಲ್ಲಿ ಯಾರಿದ್ದಾರೆಂದು ಬೊಮ್ಮಾಯಿ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.