ಸರ್ಕಾರಕ್ಕೆ ಕೊನೆಗೂ ಜ್ಞಾನೋದಯವಾಗಿದೆ: ಕುರುಬೂರು ಶಾಂತಕುಮಾರ್

ಸರ್ಕಾರಕ್ಕೆ ಕೊನೆಗೂ ಜ್ಞಾನೋದಯವಾಗಿದೆ: ಕುರುಬೂರು ಶಾಂತಕುಮಾರ್

ಬೆಂಗಳೂರು: ಒಂದು ವರ್ಷದ ನಂತರ ಜ್ಞಾನೋದಯವಾಗಿ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದು ಮಾಡಿದೆ. ಇಂದು ದೇಶದ ರೈತ ಸಮುದಾಯಕ್ಕೆ ಜಯ ಸಿಕ್ಕಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ ಬಳಿಕ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಈಗಾಗಲೇ 670ಕ್ಕೂ ಹೆಚ್ಚು ಮಂದಿ ರೈತರು ಈ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಚಳಿ, ಮಳೆ, ಗಾಳಿ ಲೆಕ್ಕಿಸದೆ ಹೋರಾಟ ಮಾಡಿದ್ದಾರೆ. ಅವರ ಆತ್ಮಕ್ಕೆ ಈ ಜಯವನ್ನು ಅರ್ಪಣೆ ಮಾಡುತ್ತೇವೆ. ಪ್ರಜಾಪ್ರಭುತ್ವದಲ್ಲಿ ರೈತರನ್ನು ದಮನ ಮಾಡುವ ಕೆಲಸ ಮಾಡುವ ಸರ್ಕಾರಗಳಿಗೆ ಇದು ಎಚ್ಚರಿಕೆ ಗಂಟೆ ಎಂದು ತೋರಿಸಿದ್ದೇವೆ. ಮುಂದಿನ ದಿನಗಳಲ್ಲಿ ಕನಿಷ್ಠ ಬೆಂಬಲ ಬೆಲೆಗೆ ಖಾತ್ರಿ ಕೊಡುವ ಕಾಯ್ದೆಯನ್ನು ಜಾರಿ ಮಾಡಲು ಹೋರಾಡುತ್ತೇವೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಸರ್ಕಾರ ಕೃಷಿ ಕಾಯ್ದೆಗಳನ್ನು ಕೊನೆಗೂ ವಾಪಾಸ್ ಪಡೆದಿದೆ. ಚಳುವಳಿಗಳಿಗೆ ಜಯ ಯಾವತ್ತೂ ಇದೆ ಎಂಬ ಸಾಬೀತಾಗಿದೆ. ಜಾತಿ, ಭಾಷೆ, ಧರ್ಮ, ಗಡಿ ಮೀರಿ ರೈತರು ಒಂದಾಗಿ ಪ್ರತಿಭಟನೆ ನಡೆಸಿದ್ದರು. 541 ಸಂಘಟನೆಗಳು ದೊಡ್ಡ ಹೋರಾಟ ನಡೆಸಿದ್ದು, ಸರ್ಕಾರ ಮೊಂಡಾಟ ಬಿಟ್ಟು ಕೊನಗೂ ರೈತ ಹೋರಾಟಕ್ಕೆ ಮಣಿದು ಕೃಷಿ ಕಾಯ್ದೆ ಹಿಂಪಡೆದಿದೆ. ಇದು ಜನಾಂದೋಲನಕ್ಕೆ ಸಿಕ್ಕ ಜಯ ಎಂದ ಬಣ್ಣಿಸಿದರು.       

ಆದರೆ ಪ್ರಧಾನಿ ಮೋದಿಯವರು ಬೆಂಬಲ ಬೆಲೆ ಖಾತ್ರಿ ಮಾಡುವವ ಕಾಯ್ದೆ ಬಗ್ಗೆ ಮಾತಾಡಿಲ್ಲ, ಹೀಗಾಗಿ ಅದರ ಬಗ್ಗೆ ಹೋರಾಟ ನಡೆಸುತ್ತೇವೆ. ಅದರ ಹೋರಾಟದ ದಿಕ್ಕಿನ ಬಗ್ಗೆ ಮುಂದೆ ನಿರ್ಧರಿಸುತ್ತೇವೆ ಎಂದರು.

ಕೃಷಿ ಕಾಯ್ದೆಗಳನ್ನು ನಿರ್ಧಾರದ ಹಿಂದೆ ರಾಜಕೀಯ ಉದ್ದೇಶ ಇರಬಹುದು. ಇತ್ತೀಚೆಗೆ ನಡೆದ ಹಲವು ಉಪಚುನಾವಣೆಗಳಲ್ಲಿ ಬಿಜೆಪಿಗೆ ಸೋಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೋಲು ತಪ್ಪಿಸಲು ಸರ್ಕಾರ ಈ ನಿರ್ಧಾರ ಮಾಡಿರಬಹುದು ಎಂದು ಬಡಗಲಪುರ ನಾಗೇಂದ್ರ ಹೇಳಿದರು.