ಪಕ್ಷ ಬಯಸಿದರೆ ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ದ: ಕೆಎಸ್ ಈಶ್ವರಪ್ಪ

ಪಕ್ಷ ಬಯಸಿದರೆ ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ದ: ಕೆಎಸ್ ಈಶ್ವರಪ್ಪ

ಬೆಂಗಳೂರು: ಸಂಪುಟದಿಂದ ನನ್ನನ್ನು ತೆಗೆಯುವುದಾದರೆ ನಾನು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ದನಿದ್ದೇನೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಬುಧವಾರ ಹೇಳಿದ್ದಾರೆ.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷ ಹಿರಿಯ ಸಚಿವರನ್ನು ಕೈ ಬಿಡುವುದಾದರೆ ಮೊದಲಿಗೆ ನಾನೇ ತಯಾರಿದ್ದೇನೆ. ಹಿರಿಯರನ್ನು ಕೈ ಬಿಟ್ಟರೆ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡುತ್ತೇವೆ.

ತಾವಾಗಿಯೇ ಬಿಟ್ಟುಕೊಡಲು ಸಿದ್ದರಿದ್ದೀರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನೀವು ರಾಜಕಾರಣದಲ್ಲಿದ್ದರೆ ಗೊತ್ತಾಗುತ್ತಿತ್ತು ಎಂದರು. ಪಕ್ಷದಲ್ಲಿ ಹಿಂದುಳಿದ ವರ್ಗಗಳ ಜವಾಬ್ದಾರಿ ನನಗೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಜನವರಿ ೫ ರಂದು ರಾಜ್ಯಮಟ್ಟದ ಹಿಂದುಳಿದ ವರ್ಗದ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದೆ. ಸಮಾವೇಶ ನಡೆಸುವ ಸ್ಥಳ ಕುರಿತು ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲು, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ ಅವರು ಸೂಚಿಸಲಿದ್ದಾರೆ. ಹಿಂದುಳಿದ ವರ್ಗದವರ ಬಗೆಗಿನ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆಯಾಗಲಿದೆ ಎಂದರು.