ವಿಚ್ಛೇದನ ಪಡೆದಿದ್ದೀರಿ, ಮಕ್ಕಳನ್ನು ನೋಡಲು ಅಡ್ಡಿಯೇಕೆ: ಹೈಕೋರ್ಟ್

ವಿಚ್ಛೇದನ ಪಡೆದಿದ್ದೀರಿ, ಮಕ್ಕಳನ್ನು ನೋಡಲು ಅಡ್ಡಿಯೇಕೆ: ಹೈಕೋರ್ಟ್

ಬೆಂಗಳೂರು, ನ.19: ವಿಚ್ಛೇದನ ಪಡೆದುಕೊಂಡ ನಂತರ ಮಗನನ್ನು ಭೇಟಿಯಾಗಲು ಇಚ್ಛೆ ವ್ಯಕ್ತಪಡಿಸಿರುವ ತಂದೆಯ ಬೇಡಿಕೆಯನ್ನು ನಿರಾಕರಿಸಿದ ತಾಯಿಗೆ ಹೈಕೋರ್ಟ್ ಬುದ್ಧಿವಾದ ಹೇಳಿದೆ.

ತಂದೆ-ತಾಯಿ ವಿಚ್ಛೇದನ ಪಡೆದಿರಬಹುದು. ಆದರೆ, ಮಗು ನಿಮ್ಮಿಬ್ಬರಿಗೂ ಹುಟ್ಟಿದೆ.

ಅಂದಮೇಲೆ ಅದನ್ನು ನೋಡುವುದಕ್ಕೆ ಅಡ್ಡಿಯೇಕೆ, ನೋಡಲಿ ಬಿಡಿ. ಈಗಿನ ಮಕ್ಕಳು ನಿಮಗೆ ಪಾಠ ಹೇಳುವಷ್ಟು ಜಾಣರಿರುತ್ತವೆ ಎಂದಿದೆ. ತಮಿಳುನಾಡಿನ ಚೆನ್ನೈನಲ್ಲಿ ವಾಸವಾಗಿರುವ ವಿಚ್ಛೇದಿತ ಪತಿ ತನ್ನ 16 ವರ್ಷದ ಮಗನನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ವಿಚ್ಛೇದಿತ ಪತ್ನಿಗೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಬಿ.ವೀರಪ್ಪ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿ ವಿಚಾರಣೆ ವೇಳೆ ತಂದೆ ಪರ ವಕೀಲರು ವಾದಿಸಿ, ಮಗುವನ್ನು ನೋಡಲು ತಾಯಿ ಬಿಡುತ್ತಿಲ್ಲ ಎಂದು ಪೀಠಕ್ಕೆ ತಿಳಿಸಿದರು. ತಾಯಿ ಪರ ವಕೀಲರು ವಾದಿಸಿ ಮಗನೀಗ ಎಸೆಸೆಲ್ಸಿ ಓದುತ್ತಿದ್ದಾನೆ. ಸಿಬಿಎಸ್ಸಿ ಮಧ್ಯಂತರ ಪರೀಕ್ಷೆಗಳು ಇದೇ ತಿಂಗಳ ಕೊನೆ ವಾರದಿಂದ ಆರಂಭವಾಗಲಿದ್ದು, ಈ ಸಮಯದಲ್ಲಿ ಅವನನ್ನು ತಂದೆಯ ಬಳಿ ಬಿಟ್ಟರೆ ಅಭ್ಯಾಸಕ್ಕೆ ತೊಂದರೆಯಾಗಬಹುದು ಎಂದರು.

ವಾದ ಒಪ್ಪದ ಪೀಠ, ಈಗಿನ ಕಾಲದ ಮಕ್ಕಳು ಸಾಕಷ್ಟು ಪ್ರಬುದ್ಧರಿರುತ್ತಾರೆ. ನೀವು ಅಂದುಕೊಳ್ಳುವಂತೆ ಏನೂ ಆಗುವುದಿಲ್ಲ. ಚಳಿಗಾಲ ಮತ್ತು ಬೇಸಿಗೆಕಾಲದ ರಜೆಯಲ್ಲಿ ಅರ್ಧ ಸಮಯ ತಂದೆ ಜೊತೆಗಿರಲು ಆದೇಶಿಸುತ್ತೇನೆ ಎಂದರು. ಆಗ ತಾಯಿ ಪರ ವಕೀಲರು ಇದಕ್ಕೆ ಆಕ್ಷೇಪಿಸಿ, ಸ್ವಾಮಿ ಆ ರೀತಿ ಆದೇಶಿಸಬೇಡಿ, ಅವರು ಮತ್ತೊಂದು ಮದುವೆಯಾಗಿದ್ದಾರೆ. ಹೊಸ ಹೆಂಡತಿಗೂ ಒಂದು ಗಂಡು ಮಗುವಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನ.24ಕ್ಕೆ ಮಗುವನ್ನು ಇಲ್ಲಿಗೆ ಕರೆಯಿಸಿ. ಅವನನ್ನು ಕಚೇರಿಯಲ್ಲಿ ಕೂರಿಸಿಕೊಂಡು ಅಪ್ಪನನ್ನು ಭೇಟಿ ಮಾಡಲು ಇಷ್ಟವೋ, ಇಲ್ಲವೋ ಎಂಬುದನ್ನು ತಿಳಿದು ನಿರ್ಧರಿಸೋಣ ಎಂದು ತಿಳಿಸಿ ವಿಚಾರಣೆ ಮುಂದೂಡಿತು.