ಐಟಿ ಕಾರಿಡಾರ್ ಡಿ ನೋಟಿಫಿಕೇಷನ್ ಅಕ್ರಮ: ಮಾಜಿ ಸಿಎಂ ಬಿಎಸ್‌ವೈಗೆ ಮತ್ತೆ ಭೂ ಕಂಟಕ

ಐಟಿ ಕಾರಿಡಾರ್ ಡಿ ನೋಟಿಫಿಕೇಷನ್ ಅಕ್ರಮ: ಮಾಜಿ ಸಿಎಂ ಬಿಎಸ್‌ವೈಗೆ ಮತ್ತೆ ಭೂ ಕಂಟಕ

ಬೆಂಗಳೂರು, ನ. 29: ಐಟಿ ಕಾರಿಡಾರ್ ಯೋಜನೆ ಕಾನೂನ ಬಾಹಿರ ಡಿ ನೋಟಿಫಿಕೇಷನ್ ಅಕ್ರಮ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪಾಲಿಗೆ ಕಂಟಕ ತಂದಿಟ್ಟಿದೆ. ಬಿ.ಎಸ್. ಯಡಿಯೂರಪ್ಪ ವಿರುದ್ಧ ರೈತ ವಾಸುದೇವರೆಡ್ಡಿ ಸಲ್ಲಿಸಿದ್ದ ಖಾಸಗಿ ದೂರನ್ನು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದ್ದು, ಡಿಸೆಂಬರ್ 1 ರಂದು ಮೊದಲ ವಿಚಾರಣೆ ನಡೆಯಲಿದೆ.

ಅಂದೇ ದೂರುದಾರರ ಪ್ರಮಾಣಿತ ಹೇಳಿಕೆ ನ್ಯಾಯಾಲಯ ದಾಖಲಿಸಿಕೊಂಡು ಬಿ.ಎಸ್. ಯಡಿಯೂರಪ್ಪ ಅವರಿಗೆ ನೋಟಿಸ್ ಜಾರಿ ಮಾಡಲಿದೆ.

ಏನಿದು ಅಕ್ರಮ: ಐಟಿ ಕಾರಿಡಾರ್ ನಿರ್ಮಾಣಕ್ಕಾಗಿ ನಗರದ ಬೆಳ್ಳಂದೂರು ಹಾಗೂ ದೇವರ ಬಿಸನಹಳ್ಳಿ ಗ್ರಾಮದಲ್ಲಿ ಕೆಐಎಡಿಬಿ ವಶಪಡಿಸಿಕೊಂಡಿದ್ದ 15.30 ಎಕರೆ ಜಮೀನನ್ನು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಡಿ ನೋಟಿಫಿಕೇಷನ್ ಮಾಡಿದ್ದರು. ಈ ಸಂಬಂಧ ರೈತ ವಾಸುದೇವರೆಡ್ಡಿ ಅವರು ಸಲ್ಲಿಸಿದ್ದ ಖಾಸಗಿ ದೂರನ್ನು ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಬಿ. ವರದಿ ಸಲ್ಲಿಸಿದ್ದರು. ನ್ಯಾಯಾಲಯದ ಅದೇಶದ ಮೇರೆಗೆ ಎರಡನೆ ಬಿ ವರದಿಯನ್ನು ಸಹ ನ್ಯಾಯಾಲಯ ತಿರಸ್ಕರಿಸಿದೆ. ಈ ಮೂಲಕ ಯಡಿಯೂರಪ್ಪ ಸಲ್ಲಿಸಿದ್ದ ಖಾಸಗಿ ದೂರನ್ನು ವಿಚಾರಣೆ ನಡೆಸಲು ನ್ಯಾಯಾಲಯ ಅಂಗೀಕರಿಸಿದೆ.

ಖಾಸಗಿ ದೂರಿನ ವಿಚಾರಣೆಯನ್ನು ನ್ಯಾಯಾಲಯ ಡಿಸೆಂಬರ್ 1 ಕ್ಕೆ ಮುಂದೂಡಿದ್ದು, ಅವತ್ತು ದೂರುದಾರ ವಾಸುದೇವರೆಡ್ಡಿ ಅವರ ಪ್ರಮಾಣೀಕೃತ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಳ್ಳಲಿದೆ. ಅಂದು ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಪ್ರಕಟಿಸಲಿದ್ದು, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ವಿಚಾರಣೆಗೆ ಒಳಪಡಿಸಲು ನ್ಯಾಯಾಲಯ ಸಮನ್ಸ್ ಜಾರಿಗೊಳಿಸಲಿದೆ.

ಐಟಿ ಕಾರಿಡಾರ್ ಯೋಜನೆಗಾಗಿ 434 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ 2001 ರಲ್ಲಿಯೇ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಅದರಲ್ಲಿ ಬೆಳ್ಳಂದೂರು ಮತ್ತು ದೇವರ ಬಿಸನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್ ಗಳ 15.30 ಎಕರೆ ಭೂಮಿಯನ್ನು ಅಂದಿನ ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಸೂಚನೆ ಮೇರೆಗೆ ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಟ್ಟು ಆದೇಶ ಹೊರಡಿಸಲಾಗಿತ್ತು. ಕೆಐಎಡಿಬಿ ಅಧಿಕಾರಿಗಳ ವಿರೋಧದ ನಡುವೆಯೂ ಕಾನೂನು ಬಾಹಿರವಾಗಿ ಡಿ ನೋಟಿಫಿಕೇಷನ್ ಮಾಡಲಾಗಿತ್ತು.

ಐಟಿ ಕಾರಿಡಾರ್ ಯೋಜನೆಯ ಡಿ ನೋಟಿಫಿಕೇಷನ್ ಹಾಗೂ ಭೂ ಮಂಜೂರಾತಿ ಅಕ್ರಮ ಕುರಿತು ಮಾಜಿ ಕೈಗಾರಿಕಾ ಸಚಿವ ಅರ್.ವಿ. ದೇಶಪಾಂಡೆ, ಉಪ ಮುಖ್ಯಮಂತ್ರಿಯಾಗಿದ್ದ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹತ್ತು ಮಂದಿಯ ವಿರುದ್ಧ ವಾಸುದೇವರೆಡ್ಡಿ ಖಾಸಗಿ ದೂರು ಸಲ್ಲಿಸಿದ್ದರು. ದೂರನ್ನು ವಿಚಾರಣೆ ನಡೆಸುವಂತೆ ವಿಶೇಷ ನ್ಯಾಯಾಲಯ ಆದೇಶ ನೀಡಿತ್ತು. ಅರ್. ವಿ ದೇಶಪಾಂಡೆ ಸೇರಿದಂತೆ ಹಲವರ ವಿರುದ್ಧದ ವಿಚಾರಣೆಯನ್ನು ಹೈಕೋರ್ಟ್ ವಜಾ ಮಾಡಿತ್ತು. ಯಡಿಯೂರಪ್ಪ ಸಹ ತನ್ನ ವಿರುದ್ಧದ ದೂರನ್ನು ವಜಾ ಮಾಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಯಡಿಯೂರಪ್ಪ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಇದೀಗ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಖಾಸಗಿ ದೂರನ್ನು ಅಂಗೀಕರಿಸಿದ್ದು, ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ವರದಿಯನ್ನು ತಿರಸ್ಕರಿಸಿದೆ. ಈ ಮೂಲಕ ಐಟಿ ಕಾರಿಡಾರ್ ಯೋಜನೆಯ ಬಹುದೊಡ್ಡ ಅಕ್ರಮದ ತನಿಖೆಗೆ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ. ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ಮೌನಕ್ಕೆ ಶರಣಾಗಿರುವ ಯಡಿಯೂರಪ್ಪ ಅವರಿಗೆ ಈ ಪ್ರಕರಣ ಕಂಟಕವಾಗುವ ಸಾಧ್ಯತೆಯಿದೆ.

ಡಿ ನೋಟಿಫಿಕೇಷನ್ ಪ್ರಕರಣ ಸಂಬಂಧ ಯಡಿಯೂರಪ್ಪ ವಿರುದ್ಧ ತನಿಖೆ ನಡೆಸಿದ್ದ ಲೋಕಾಯುಕ್ತ ಡಿವೈಎಸ್ ಪಿ ಶಂಕರ ನಾರಾಯಣ ಎರಡು ಬಾರಿ ಬಿ ವರದಿ ಸಲ್ಲಿಸಿದ್ದರು. ಲೋಕಾಯುಕ್ತ ಪೊಲೀಸರ ಬಿ ವರದಿಗೆ ವಾಸುದೇವರೆಡ್ಡಿ ಪರ ವಕೀಲ ಕೆ.ವಿ. ಧನಂಜಯ ಆಕ್ಷೇಪಣೆ ಸಲ್ಲಿಸಿದ್ದರು. ದೂರುದಾರರ ಆಕ್ಷೇಪಣೆಯನ್ನು ಅಂಗೀಕರಿಸಿರುವ ನ್ಯಾಯಾಲಯ ಲೋಕಾಯುಕ್ತ ಪೊಲೀಸರ ಬಿ ವರದಿಯನ್ನು ತಿರಸ್ಕರಿಸುವ ಮೂಲಕ ಐಟಿ ಕಾರಿಡಾರ್ ಅಕ್ರಮ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

ಪ್ರಕರಣದ ಎರಡನೆ ಆರೋಪಿಯಾಗಿರುವ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ವರದಿಯಲ್ಲಿಯೇ ಕೆಲವು ಮಹತ್ವದ ಸಾಕ್ಷಾಧಾರಗಳು ಇವೆ ಎಂದು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ. ಜಯಂತ್ ಕುಮಾರ್ ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣದ ತನಿಖೆಗೆ ಹಸಿರು ನಿಶಾನೆ ಸಿಕ್ಕಂತಾಗಿದೆ.